ಬೆಂಗಳೂರು, ಜು 21 (DaijiworldNews/MS): ಆರ್ಥಿಕತೆಯ ಚಲನಶೀಲತೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಐದು ಗ್ಯಾರಂಟಿ ಯೋಜನೆಗಳ ಮೂಲಕ ಸಾರ್ವತ್ರಿಕ ಮೂಲ ಆದಾಯದ ಪರಿಕಲ್ಪನೆಯನ್ನು ಪರಿಚಯಿಸುತ್ತಿರುವ ಮೊದಲ ರಾಜ್ಯ ಕರ್ನಾಟಕವಾಗಿದೆ. ಇದು ಕರ್ನಾಟಕ ಮಾದರಿ ಅಭಿವೃದ್ಧಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಪಾದಿಸಿದರು.
ಅವರು ಇಂದು ವಿಧಾನಸಭೆಯಲ್ಲಿ 23-24ನೇ ಸಾಲಿನ ಆಯವ್ಯಯ ಕುರಿತ ಚರ್ಚೆಗೆ ಉತ್ತರ ನೀಡಿದರು. ಈ ಸಂದರ್ಭದಲ್ಲಿ ಗ್ಯಾರಂಟಿ ಕಾರ್ಯಕ್ರಮಗಳ ಮೂಲಕ ದೇಶದಲ್ಲಿಯೇ ದೊಡ್ಡ ಮೊತ್ತ ನೀಡುತ್ತಿರುವ ಮೊದಲ ರಾಜ್ಯ ಕರ್ನಾಟಕ ಎಂದ ಅವರು, ವಿರೋಧ ಪಕ್ಷದವರು ಗ್ಯಾರಂಟಿ ಯೋಜನೆಗಳ ಜಾರಿ ಸಾಧ್ಯವಿಲ್ಲ ಎಂದರು. ಆದರೆ ಈಗಾಗಲೇ 3 ಯೋಜನೆಗಳು ಜಾರಿಯಾಗಿವೆ. ಗೃಹ ಲಕ್ಷ್ಮಿ ಯೋಜನೆಗೆ ನೋಂದಣಿ ಪ್ರಾರಂಭವಾಗಿದೆ. ಯುವನಿಧಿ ಯೋಜನೆ ಬಹುತೇಕ ಡಿಸೆಂಬರ್ ತಿಂಗಳಿನಿಂದ ಪ್ರಾರಂಭವಾಗುವ ನಿರೀಕ್ಷೆ ಇದೆ ಎಂದು ತಿಳಿಸಿದರು.
ಈ ಎಲ್ಲ ಯೋಜನೆಗಳಿಗೆ ಆಯವ್ಯಯದಲ್ಲಿ ಅನುದಾನ ಹಂಚಿಕೆ ಮಾಡಲಾಗಿದೆ. ಅನುದಾನ ಕ್ರೋಢೀಕರಣವನ್ನೂ ಆಯವ್ಯಯದಲ್ಲಿ ವಿವರಿಸಲಾಗಿದೆ.ಈ ಕಾರ್ಯಕ್ರಮಗಳಿಗೆ ವಾರ್ಷಿಕ ಒಟ್ಟು 52, 068 ಕೋಟಿ ರೂ.ಗಳು ಅಗತ್ಯವಿದೆ. 1.3೦ ಕೋಟಿ ಕುಟುಂಬಗಳಿಗೆ ಈ ಗ್ಯಾರಂಟಿ ಯೋಜನೆಗಳ ಸೌಲಭ್ಯ ದೊರೆಯಲಿದೆ. ಪ್ರತಿ ಕುಟುಂಬಕ್ಕೆ ತಿಂಗಳಿಗೆ 4-5 ಸಾವಿರ ರೂ. ಅಂದರೆ ವಾರ್ಷಿಕ ೪೮,೦೦೦- ೬೦೦೦೦ ರೂ. ದೊರಕುತ್ತಿದೆ. ದೇಶದ ಇತಿಹಾಸದಲ್ಲಿ ಇಷ್ಟೊಂದು ದೊಡ್ಡ ಗಾತ್ರದ ಮೊತ್ತವನ್ನು ಜಾತಿ ಧರ್ಮ ನೋಡದೇ ಮಾಡಿರುವ ಮೊದಲ ರಾಜ್ಯ ಕರ್ನಾಟಕ ಎಂದರು. ಈ ವರ್ಷ 35,410 ಕೋಟಿಗಳನ್ನು 5 ಗ್ಯಾರೆಂಟಿಗಳಿಗೆ ಮೀಸಲಿರಿಸಿದ್ದೇವೆ ಎಂದು ವಿವರಿಸಿದರು.
ಜನರು ಬೆಲೆ ಏರಿಕೆ, ಇಂಧನ ಬೆಲೆ ಏರಿಕೆ, ನಿರುದ್ಯೋಗ ಮೊದಲಾದ ಸಮಸ್ಯೆಗಳಿಂದ ತತ್ತರಿಸಿದ್ದು, ಅವರ ಬದುಕು ಸುಧಾರಿಸುವ ಉದ್ದೇಶದಿಂದ ಈ ಯೋಜನೆಗಳನ್ನು ಜಾರಿಗೆ ತರಲಾಗಿದೆ ಎಂದು ತಿಳಿಸಿದರು