ದೆಹಲಿ, ಜು 20 (DaijiworldNews/SM): ಮಣಿಪುರದಲ್ಲಿ ಇಬ್ಬರು ಮಹಿಳೆಯರನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಹೇಳಿದ್ದಾರೆ.
ಆರೋಪಿಗಳಲ್ಲಿ ಒಬ್ಬನನ್ನು ಇಂದು ಬೆಳಗ್ಗೆ ಬಂಧಿಸಲಾಗಿದೆ ಎಂದು ರಾಜ್ಯ ಪೊಲೀಸರು ತಿಳಿಸಿದ್ದಾರೆ. ಈ ವಿಡಿಯೊ ವೈರಲ್ ಆದ ನಂತರ ತೌಬಲ್ ಜಿಲ್ಲೆಯಿಂದ 32ರ ಹರೆಯದ ಹೆರಾದಾಸ್ ಎಂಬ ವ್ಯಕ್ತಿಯನ್ನು ಬಂಧಿಸಲಾಗಿದೆ.ವಿಡಿಯೊದಲ್ಲಿ, ಹಸಿರು ಟೀ ಶರ್ಟ್ ಧರಿಸಿದ್ದ ವ್ಯಕ್ತಿ, ಮಹಿಳೆಯೊಬ್ಬರನ್ನು ಎಳೆದುಕೊಂಡು ಹೋಗುತ್ತಿರುವುದು ಕಂಡುಬಂದಿದೆ. ಆ ವ್ಯಕ್ತಿಯೇ ಹೆರಾದಾಸ್. ಇದೀಗ ಇಬುಂಗೋ ಅಲಿಯಾಸ್ ಅಬ್ದುಲ್ ಹಿಲಿಮ್(38) ಮತ್ತು ಇನ್ನೊಬ್ಬನ್ನು ಬಂಧಿಸಲಾಗಿದೆ. ಅದರಂತೆ ಒಟ್ಟು ನಾಲ್ವರನ್ನು ಪೊಲೀಸರು ಬಂಧಿಸಿದ್ದು, ಉಳಿದ ಆರೋಪಿಗಳಿಗಾಗಿ ಶೋಧಕಾರ್ಯ ನಡೆಯುತ್ತಿದೆ.
ಮೇ 4 ರಂದು ನಡೆದ ಈ ಘಟನೆಯ ವಿಡಿಯೊ ದೇಶಾದ್ಯಂತ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಅಪರಾಧ ಮತ್ತು ವಿಡಿಯೊ ಹೊರಬೀಳುವುದರ ನಡುವಿನ ದೊಡ್ಡ ಅಂತರವನ್ನು ಗಮನದಲ್ಲಿಟ್ಟುಕೊಂಡು ಪೊಲೀಸರ ವ್ಯಾಪಕ ಖಂಡನೆಯ ನಡುವೆಯೇ ಬಂಧನಗಳು ನಡೆದಿವೆ.
ವಿಡಿಯೊ ನೋಡಿದ ನಂತರ ನಾವು ಈ ಅಪರಾಧವನ್ನು ಖಂಡಿಸುವ ನಿರ್ಧಾರವನ್ನು ತೆಗೆದುಕೊಂಡಿದ್ದೇವೆ.ನಾವು ಅದನ್ನು ಮಾನವೀಯತೆಯ ವಿರುದ್ಧದ ಅಪರಾಧ ಎಂದು ಕರೆಯುತ್ತೇವೆ. ಹೆಚ್ಚಿನ ತನಿಖೆ ನಡೆಯುತ್ತಿದೆ. ಈ ಪ್ರಕರಣದಲ್ಲಿ ಭಾಗಿಯಾದವರನ್ನೂ ಬಂಧಿಸಿ ದೇಶದ ಕಾನೂನಿನಂತೆ ಪ್ರಕರಣ ದಾಖಲಿಸಲಾಗುವುದು, ರಾಜ್ಯವು ಅಪರಾಧಿಗಳಿಗೆ ಮರಣದಂಡನೆ ವಿಧಿಸುವುದಾಗಿ ಸಿಎಂ ಹೇಳಿದ್ದಾರೆ.