ಬೆಂಗಳೂರು, ಜು 19 (DaijiworldNews/AK):ಇನ್ನೊಬ್ಬ ಶಂಕಿತ ಉಗ್ರ ವಿದೇಶದಲ್ಲಿ ತಲೆಮರೆಸಿಕೊಂಡಿದ್ದು, ಈ ಜಾಲದ ಕುರಿತು ತನಿಖೆಯನ್ನು ಎನ್ಐಎಗೆ ವಹಿಸಲು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರು ಆಗ್ರಹಿಸಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಶಂಕಿತ ಉಗ್ರರನ್ನು ಬಂಧಿಸಿದ ಕ್ರಮವನ್ನು ಸ್ವಾಗತಿಸಿ, ಸಿಸಿಬಿ ಪೋಲಿಸರಿಗೆ ಅಭಿನಂದನೆ ಸಲ್ಲಿಸಿದರು. ಈ ಜಾಲ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಸಕ್ರಿಯವಾಗಿರುವ ಸಾಧ್ಯತೆ ಇದ್ದು, ಇದನ್ನು ಎನ್ಐಎ ತನಿಖೆಗೆ ಒಪ್ಪಿಸಿ ಎಂದು ಒತ್ತಾಯಿಸಿದರು.
ಶಂಕಿತ ಉಗ್ರರರು ಬೆಂಗಳೂರಿನ ಹಲವೆಡೆ ಬಾಂಬ್ ಸ್ಫೋಟಿಸಲು ಯೋಜಿಸಿದ್ದರು ಎಂಬುದು ಬಹಳ ಗಂಭೀರವಾದ ಸಂಗತಿ ಎಂದ ಅವರು, ಕಾಂಗ್ರೆಸ್ ನಾಯಕರು ಈಗಲಾದರೂ ಮನ ಪರಿವರ್ತನೆ ಮಾಡಿಕೊಳ್ಳಲಿ ಎಂದು ಹೇಳಿದರು. ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಸ್ಫೋಟ ಆದಾಗ ಕೆಪಿಸಿಸಿ ಅಧ್ಯಕ್ಷರು ಬಿಜೆಪಿಯನ್ನು ನಿಂದಿಸಿದ್ದರು. ಬಿಜೆಪಿ ದುರುದ್ದೇಶದಿಂದ ಬಂಧಿಸಿದೆ ಎಂದು ಟೀಕಿಸಿದ್ದರು ಎಂದು ವಿವರಿಸಿದರು.
ಉಗ್ರಗಾಮಿ ಜಾಲ ಕರ್ನಾಟಕದಲ್ಲಿ ವಿಸ್ತರಿಸುತ್ತಿರುವುದು ನಿರ್ವಿವಾದ ಸಂಗತಿ ಎಂದು ವಿಷಾದ ವ್ಯಕ್ತಪಡಿಸಿದರು.. ವಿವೇಚನೆ ಇಲ್ಲದೆ ಮತಬ್ಯಾಂಕಿಗಾಗಿ ಅವರೆಲ್ಲ ನಮ್ಮ ಸೋದರರು ಎಂದು ಅಪ್ಪಿಕೊಳ್ಳಲು ಹೋಗಬೇಡಿ ಎಂದು ಕಿವಿಮಾತು ಹೇಳಿದರು. ಟೆರರಿಸ್ಟ್ ಗಳಿಗೆ ಕಾಂಗ್ರೆಸ್ ಅಧಿಕಾರದಲ್ಲಿ ಇದ್ದರೆ 'ನಮ್ದೂ ಕೆ ಸರಕಾರ್' ಎಂಬ ಭಾವನೆ ಬರುತ್ತದೆ ಎಂದು ಟೀಕಿಸಿದರು.
ಇದೇ ವೇಳೆ ವಿಪಕ್ಷಗಳ ಒಕ್ಕೂಟ ಸಭೆ ಕುರಿತು ಪ್ರತಿಕ್ರಿಯಿಸಿದ ಸಿ.ಟಿ.ರವಿ , ’ಅದೇ ಬಾಟಲಿ ಅದೇ ವೈನ್ ಆದರೆ ಹೊಸ ಲೇಬಲ್ ನಂತಿದ” ಎಂದು ವ್ಯಂಗ್ಯ ಮಾಡಿದರು.