ಬೆಂಗಳೂರು, ಜು 19 (DaijiworldNews/AK) ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಗೆಲುವಿಗಾಗಿ ಬಿಜೆಪಿ ನೇತೃತ್ವದ `ಎನ್ಡಿಎ' ಮೈತ್ರಿಕೂಟ ಮತ್ತು ವಿಪಕ್ಷಗಳ ಇಂಡಿಯಾ' ಮೈತ್ರಿಕೂಟಗಳು ರಣ ಕಹಳೆ ಮೊಳಗಿಸಿವೆ. ಈ ಮಧ್ಯೆ ಎನ್ಡಿಎ ಮೈತ್ರಿಕೂಟ ಮತ್ತು ವಿಪಕ್ಷಗಳ ಮೈತ್ರಿಕೂಟ ನಡುವೆ ವಾಕ್ ಸಮರ ತಾರಕಕ್ಕೇರಿದೆ.
ಎನ್ಡಿಎ ಮೈತ್ರಿಕೂಟ ಕುರಿತು ಟ್ವಿಟ್ ಮಾಡಿರುವ ಅಮ್ ಆದ್ಮಿ ಪಕ್ಷ, ’ಅಲಿಬಾಬಾ ಮತ್ತು ನಲವತ್ತು ಕಳ್ಳರ ಕತೆ ಕೇಳಿರಬಹುದು. ಇದು ಡೋಂಗಿ ಬಾಬಾ ಮತ್ತು 38 ಕಳ್ಳರ ಗುಂಪು ಎಂದು ಟೀಕೆ ಮಾಡಿದೆ. ಈ ಗುಂಪಿನಲ್ಲಿ ಎಷ್ಟೋ ಜನ ತಮ್ಮ ಪಕ್ಷಕ್ಕೇ ಚೂರಿ ಹಾಕಿದವರು ಇದ್ದಾರೆ. ಇ.ಡಿ - ಐ.ಟಿ ಭಯದಿಂದ ಬಂದವರು ಇದ್ದಾರೆ, ಪ್ರತ್ಯೇಕ ದೇಶಕ್ಕೆ ಬೇಡಿಕೆ ಇಟ್ಟುಕೊಂಡೇ ಪಕ್ಷ ಮಾಡಿಕೊಂಡಿರುವ ತುಕಡೆ – ತುಕಡೆ ಗ್ಯಾಂಗ್ನವರಿದ್ದಾರೆ, ಎಲ್ಲಿ ಅಧಿಕಾರ ಇರುತ್ತೋ ಅಲ್ಲಿ ಹೋಗುವ ಬಹಳಷ್ಟು ಗಂಜಿ ಗಿರಾಕಿಗಳಿದ್ದಾರೆ, ನಿನ್ನೆ ತನಕ ಕಳ್ಳರಾಗಿದ್ದವರು ಇಂದು ಮಳ್ಳರಾಗಿದ್ದಾರೆ, ಎಷ್ಟೇ ದೊಡ್ಡ ಭ್ರಷ್ಟ ಇದ್ದರೂ, ಪಕ್ಷ ಸೇರಿದ ಕೂಡಲೇ ಕ್ಲೀನ್ ಮಾಡಿಕೊಡುವ ಬಿಜೆಪಿ ವಾಷಿಂಗ್ ಮಿಷನ್ ಪಕ್ಷ ಇದ” ಎಂದು ಲೇವಡಿ ಮಾಡಿದೆ. ಈ ಕುರಿತು ಎಎಪಿ ಹ್ಯಾಪ್ಟ್ಯಾಗ್ ಬಳಸಿ ಬಿಜೆಪಿ ವಿರುದ್ಧ ವ್ಯಂಗ್ಯ ಮಾಡಿದೆ.
ಬಿಜೆಪಿ ನೇತೃತ್ವದ ಎನ್ಡಿಎ ಸೋಲಿಸಲು ತಂತ್ರ ಹೆಣೆಯುತ್ತಿರುವ 26 ವಿರೋಧ ಪಕ್ಷಗಳು ಒಗ್ಗೂಡಿ ಮೈತ್ರಿಕೂಟ ಇಂಡಿಯನ್ ನ್ಯಾಷನಲ್ ಡೆವಲಪ್ಮೆಂಟಲ್ ಇನ್ಕ್ಯೂಸಿವ್ ಅಲಯನ್ 'ಇಂಡಿಯಾ' ರಚಿಸಿಕೊಳ್ಳುವ ಮೂಲಕ ಒಂದು ಹೆಜ್ಜೆ ಮುಂದಿಟ್ಟಿದ್ದಾರೆ. ಇತ್ತ ವಿಪಕ್ಷಗಳ 'ಮಹಾ ಮೈತ್ರಿಕೂಟ'ಕ್ಕೆ ಸೆಡ್ಡು ಹೊಡೆಯಲು ಎನ್ಡಿಎ ಮೈತ್ರಿಕೂಟ 38 ಪಕ್ಷಗಳ ನಾಯಕರು ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ನೇತೃತ್ವದಲ್ಲಿ ದೆಹಲಿಯಲ್ಲಿ ಮಂಗಳವಾರ 'ಶಕ್ತಿ ಪ್ರದರ್ಶನ'ದ ಸಭೆ ನಡೆಸಿದ್ದಾರೆ.