ಪ.ಬಂಗಾಳ,ಏ03(AZM):ಮಮತಾ ಬ್ಯಾನರ್ಜಿಯವರು ಪಶ್ಚಿಮ ಬಂಗಾಳದ ಅಭಿವೃದ್ಧಿಗೆ ತಡೆಯೊಡ್ಡುತ್ತಿದ್ದು, ಅವರನ್ನು ಈ ಬಾರಿಯ ಚುನಾವಣೆಯಲ್ಲಿ ಸೋಲಿಸಿ ಎಂದು ಮತದಾರರಿಗೆ ಪ್ರಧಾನಿ ನರೇಂದ್ರ ಮೋದಿಯವರು ಕರೆ ನೀಡಿದ್ದಾರೆ. ಹಾಗೂ ಅವರನ್ನು ಸ್ಪೀಡ್ ಬ್ರೇಕರ್ ದೀದಿ ಎಂದು ಲೇವಡಿ ಮಾಡಿದ್ದಾರೆ.
ಇಂದು ಪಶ್ಚಿಮ ಬಂಗಾಳದ ಸಿಲಿಗುರಿಯಲ್ಲಿ ನಡೆದ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಇನ್ನಿತರ ರಾಜ್ಯಗಳಲ್ಲಿ ನಾನು ಅಭಿವೃದ್ಧಿ ಕಾರ್ಯ ಮಾಡಿದಂತೆ ಪಶ್ಚಿಮ ಬಂಗಾಳದಲ್ಲಿಯೂ ನಾನು ಅಭಿವೃದ್ದಿ ಕಾರ್ಯಗಳನ್ನು ಮಾಡಬಲ್ಲೆ. ಆದರೆ ಇಲ್ಲಿ ಸ್ಪೀಡ್ ಬ್ರೇಕರ್ ಇದೆ, ಅವರೇ ದೀದಿ ಎಂದಿದ್ದಾರೆ.
2021ರಲ್ಲಿ ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಆದಾಗ್ಯೂ 2019ರ ಈ ಲೋಕಸಭಾ ಚುನಾವಣೆಯು ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಅಧಿಕಾರವನ್ನು ಕೊನೆಗೊಳಿಸಲಿರುವ ಆರಂಭಿಕ ಕ್ರಿಯೆ ಆಗಲಿದೆ ಎಂದು ಹೇಳಿದರು.