ವಯನಾಡು, ಏ 03(MSP): ವಯನಾಡು ಲೋಕಸಭೆ ಕ್ಷೇತ್ರದಿಂದ ಕಣಕ್ಕಿಳಿಯಲಿರುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ದ ಮತ್ತೊಬ್ಬ ರಾಹುಲ್ ಗಾಂಧಿ ಅಖಾಡಕ್ಕೆ ಇಳಿದಿದ್ದಾರೆ. ಹೌದು ವಯನಾಡುವಿನ ಎರುಮಲೈ ನಿವಾಸಿಯಾಗಿರುವ ’ರಾಹುಲ್ ಗಾಂಧಿ ಕೆ.ಇ ’ಎಂಬ ವ್ಯಕ್ತಿ, ಕಾಂಗ್ರೆಸ್ ನ ರಾಹುಲ್ ಗಾಂಧಿ ವಿರುದ್ದ ಕಣಕ್ಕೆ ಇಳಿಯಲಿದ್ದಾರೆ.
ಡಿವೈ ಎಫ್ ಕಾರ್ಯಕರ್ತನೆಂದು ಹೇಳಲಾಗುತ್ತಿರುವ ಕೇರಳದ ರಾಹುಲ್ ಗಾಂಧಿಯು ತನ್ನ ಹೆಸರಿನಲ್ಲಿರುವ ಕೆ.ಇ ತೆಗೆದು ಹಾಕಲು ತೀವ್ರ ಶ್ರಮಪಡುತ್ತಿದ್ದಾನೆ. ಕೇರಳದಲ್ಲಿ ಏ.4ರಂದು ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕವಾಗಿದ್ದು, ಇದರ ಮುಂಚಿತವಾಗಿ ಹೆಸರಿನೊಂದಿಗೆ ಇರುವ ’ಕೆ.ಇ ’ನ್ನು ತೆಗೆದು ಹಾಕಲು ಅಫಿಡವಿತ್ ಸಲ್ಲಿಸಿದ್ದಾನೆ. ಇಷ್ಟು ಮಾತ್ರವಲ್ಲದೆ ಮಂತಯಂತ್ರದಲ್ಲಿ ರಾಹುಲ್ ಗಾಂಧಿ ಹೆಸರಿನ ಬಳಿಯೇ ತನ್ನ ಹೆಸರು ನಮೂದಿಸಬೇಕು ಎಂದು ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಿದ್ದು ಕೇರಳಿಗ ರಾಹುಲ್ ಕೂಡಾ ನಾಳೆ ನಾಮಪತ್ರ ಸಲ್ಲಿಸಲಿದ್ದಾನೆ.
ಕಾಂಗ್ರೆಸ್ ನ ರಾಹುಲ್ ಗಾಂಧಿ ವಿರುದ್ದ ಸ್ಪರ್ಧಿಸಲು ಕೇರಳಿಗ ರಾಹುಲ್ ಗಾಂಧಿ ರಾಷ್ಟ್ರೀಯ ಪಕ್ಷವೊಂದಕ್ಕೆ ಸಂಪರ್ಕಿಸಿದ್ದು ಅಲ್ಲಿ ಪ್ರಯತ್ನ ಫಲ ನೀಡದಾಗ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾನೆ.
ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಏ.4ರಂದು ಬೃಹತ್ ರ್ಯಾಲಿ ಮೂಲಕ ಆಗಮಿಸಿ ಚುನಾವಣಾಧಿಕಾರಿಗೆ ನಾಮಪತ್ರ ಸಲ್ಲಿಸಲಿದ್ದಾರೆ. ರಾಹುಲ್ ಗಾಂಧಿಗೆ ಪ್ರಿಯಾಂಕ ಗಾಂಧಿ ಕೂಡಾ ಸಾಥ್ ನೀಡಲಿದ್ದಾರೆ. ಕಾಂಗ್ರೆಸ್ ನಾಯಕರು ಈಗಾಗಲೇ ಕೇರಳಕ್ಕೆ ಆಗಮಿಸಿ ನಾಮಪತ್ರ ಸಲ್ಲಿಕೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.