ಬೆಂಗಳೂರು, ಜು 17 (DaijiworldNews/AK) ರಾಜ್ಯದಲ್ಲಿ ರೈತರು ಆತ್ಮಹತ್ಯೆ ಮಾಡುತ್ತಿದ್ದು, ಕಾಂಗ್ರೇಸ್ ಮಹಾ ಘಟಬಂಧನ ಮಾಡುತ್ತಿದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಆರೋಪಿಸಿದ್ದಾರೆ. ಕಳೆದ ಎರಡು ತಿಂಗಳಲ್ಲಿ ನಮ್ಮ ರಾಜ್ಯದಲ್ಲಿ 42 ರೈತರು ಆತ್ಮಹತ್ಯೆ ಮಾಡಿದ್ದು ಅತ್ತ ಗಮನ ಹರಿಸದೇ ಕಾಂಗ್ರೆಸ್ ಮಹಾ ಘಟಬಂಧನ್ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಮಾಧ್ಯಮದೊಂದಿಗೆ ಮಾತನಾಡಿದ ಅವರು, ಈ ಸಭೆಗೆ ಕೋಟ್ಯಾಂತರ ರೂ ಖರ್ಚು ಮಾಡುತ್ತಿದ್ದಾರೆ. ಬ್ಯಾನರ್ ಹಾಕಿ ದೊಡ್ಡ ಸಾಧನೆ ಮಾಡಿದ್ದೇವೆ ಎಂದು ಹೊರಟ್ಟಿದ್ದಾರೆ. ರಾಜ್ಯದಲ್ಲಿ 42 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದರ ಕಡೆ ಗಮನವಿಲ್ಲ. ರೈತರಿಗೆ ಆತ್ಮಹತ್ಯೆ ಮಾಡಿಕೊಳ್ಳಬೇಡಿ ಎಂದು ಸರ್ಕಾರ ಹೇಳುವ ಕೆಲಸ ಮಾಡಿಲ್ಲ ಎಂದು ಟೀಕಿಸಿದರು..
ಇದೇ ಸಂದರ್ಭದಲ್ಲಿ ಅವರು, ಬೆಂಗಳೂರಿನಲ್ಲಿ ಇಂದು ಸಂಜೆ ನಡೆಯಲಿರುವ ವಿಪಕ್ಷ ನಾಯಕರ ಸಭೆಯ ತಮಗೆ ಯಾಕೆ ಆಹ್ವಾನ ನೀಡಲಾಗಿಲ್ಲ ಎಂಬುದರ ಬಗ್ಗೆ ಮಾತನಾಡಿದ್ದು “ಅವರು ಜೆಡಿಎಸ್ ಪಕ್ಷವನ್ನು ಲೆಕ್ಕಕ್ಕೆ ಇಟ್ಟಿಲ್ಲ. ಮಹಾಘಟಬಂಧನ್ ಆಯೋಜಕರು ಜೆಡಿಎಸ್ ಕಥೆ ಮುಗಿದೇ ಹೋಗಿದೆ ಎಂದುಕೊಂಡಿದ್ದಾರೆ. ಅವರು ಆಹ್ವಾನ ಕೊಟ್ಟರೋ, ಇಲ್ಲವೊ ಎಂಬ ವಿಚಾರ ಈಗ ಅಗತ್ಯವಿಲ್ಲ ಎಂದರು.
ಇನ್ನು ಎನ್ಡಿಎ ಮೈತ್ರಿಕೂಟದ ಸಭೆ ಕುರಿತು ಮಾತನಾಡಿದ ಎಚ್ಡಿಕೆ, ಲೋಕಸಭೆಗೆ ಇನ್ನು 8, 9 ತಿಂಗಳು ಸಮಯವಿದೆ. ಏನೇನಾಗುತ್ತೋ ನೋಡೋಣ” ಎಂದಿದ್ದಾರೆ. ರಾಜ್ಯದ ಜನ ಒಂದೊಂದು ಬಾರಿ ಒಂದೊಂದು ತೀರ್ಮಾನ ತೆಗೆದುಕೊಂಡಿದ್ದಾರೆ. ಈಗ ಏನೇ ಹೇಳಿದರೂ ಅದು ಪ್ರಿಮೆಚುರ್ ಆಗುತ್ತದೆ. ಏನೇನಾಗುತ್ತೋ ಕಾದು ನೋಡೋಣ ಎಂದು ಹೇಳಿದರು.