ಮೈಸೂರು,ಏ 03(MSP): ನಮ್ಮ ತಂದೆ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್, ಅಂಬರೀಶ್ ಅವರೊಂದಿಗೆ 35 ವರ್ಷಗಳ ಒಡನಾಟ ಇಟ್ಟುಕೊಂಡಿದ್ದರು. ಅರಮನೆಯ ಕಷ್ಟದ ದಿನಗಳಲ್ಲಿ ಅವರು ಬೆನ್ನೆಲುಬಾಗಿ ಜತೆನಿಂತಿದ್ದರು. ಅವರ ಸಹಾಯ ನಿಜಕ್ಕೂ ಸ್ಮರಣೀಯ. ಅಂಬರೀಶ್ ಅವರಿಗೆ ಮೈಸೂರು ರಾಜ ಮನೆತನ ಎಂದಿಗೂ ಕೃತಜ್ಞವಾಗಿರುತ್ತದೆ ಎಂದು ಹೇಳಿದ್ದಾರೆ.
ಮಂಗಳವಾರ ಮೈಸೂರಿನ ಖಾಸಗಿ ಹೋಟೆಲ್ ನಲ್ಲಿ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಯದುವೀರ್ ಅವರು, ’ನಮ್ಮ ಕುಟುಂಬಕ್ಕೂ ಅಂಬರೀಶ್ ಕುಟುಂಬಕ್ಕೂ ಅವಿನಾಭಾವ ಸಂಬಂಧವಿತ್ತು. ಇದನ್ನು ಮರೆಯಲಾರೆ ’ ಎಂದು ಹೇಳಿ ಪರೋಕ್ಷವಾಗಿ ಸುಮಲತಾ ಅಂಬರೀಶ್ ಪರ ಬ್ಯಾಟ್ ಬೀಸಿದರು.
ಇದೇ ವೇಳೆ ಸುಮಲತಾ ಸ್ಪರ್ಧೆ ಬಗೆಗಿನ ಪ್ರಶ್ನೆಗೆ ಉತ್ತರಿಸಿದ ಯದುವೀರ್ ಒಡೆಯರ್ ಅವರು, ಅವರ ಹೋರಾಟಕ್ಕೆ ಶುಭವಾಗಲಿ. ಆದರೆ ಯಾವುದೇ ವ್ಯಕ್ತಿಯ ಬಹಿರಂಗ ಪ್ರಚಾರಕ್ಕೆ ನಾನು ತೆರಳುವುದಿಲ್ಲ. ನಾನು ರಾಜಕಾರಣದಿಂದ ದೂರ ಇದ್ದೇನೆ. ಮಂಡ್ಯದ ಜನರಿಗೆ ಯಾರನ್ನು ಚುನಾಯಿಸಬೇಕು ಎಂದು ತಿಳಿದಿದೆ. ಮುಂದಿನ ದಿನದಲ್ಲಿ ಅವರೇ ಸೂಕ್ತ ಉತ್ತರ ನೀಡಲಿದ್ದಾರೆ ಎಂದು ಪರೋಕ್ಷವಾಗಿ ಸುಮಲತಾ ಅಂಬರೀಷ್ ಗೆ ಬೆಂಬಲ ಸೂಚಿಸಿದರು.