ನವದೆಹಲಿ, ಏ 03(MSP): ಜನಪ್ರಿಯ ಸೋಶಿಯಲ್ ಮೀಡಿಯಾ ಆದ ವ್ಯಾಟ್ಸಾಪ್ ನಲ್ಲಿ ಇನ್ಮುಂದೆ ಬೇಕಾಬಿಟ್ಟಿ ಗ್ರೂಪ್ಗಳನ್ನು ಸೃಷ್ಟಿಸಿ, ಸದಸ್ಯರನ್ನು ಸೇರಿಸುವ ಚಾಳಿಗೆ ಕಡಿವಾಣ ಬೀಳಲಿದೆ. ಯಾಕೆಂದರೆ ವ್ಯಾಟ್ಸಾಪ್ ಸಂಸ್ಥೆ ಹೊಸ ಪ್ರೈವೆಸಿ ಸೆಟ್ಟಿಂಗ್ ಫೀಚರ್ ನ್ನು ಆಪ್ಡೇಟ್ ಮಾಡಿದ್ದು, ಗ್ರೂಪ್ಗೆ ಯಾರಾನ್ನಾದರೂ ಸೇರಿಸುವ ಮುನ್ನ ಅವರ ಅನುಮತಿಯನ್ನು ಪಡೆಯುವಂತೆ ಹೊಸ ಪ್ರೈವೆಸಿ ಸೆಟ್ಟಿಂಗ್ ಪರಿಚಯಿಸಿದೆ.
ವ್ಯಾಟ್ಸಾಪ್ ನಲ್ಲಿ ಬೇಕಾಬಿಟ್ಟಿಯಾಗಿ ಯಾವುದೇ ಗೊತ್ತುಗುರಿಯಿಲ್ಲದ ಗ್ರೂಪ್ಗಳನ್ನು ಸೃಷ್ಟಿಸಿ ಸದಸ್ಯರನ್ನು ಸೇರಿಸುವುದು ಕೂಡಾ ಕೆಟ್ಟ ಚಾಳಿಯಾಗಿ ಬಿಟ್ಟಿದೆ. ಲೋಕಸಭೆ ಚುನಾವಣೆ ಮುಂದಿರುವ ಹಿನ್ನಲೆಯಲ್ಲಿ ಹಾಗೂ ಸುಳ್ಳು ಸುದ್ದಿ ವದಂತಿಗಳನ್ನು ಹರಡಲು ಕಟ್ಟು ನಿಟ್ಟಿನ ಕ್ರಮ ಕೈಗೊಂಡಿರುವ ಫೇಸ್ ಬುಕ್ ಅಧೀನ ಸಂಸ್ಥೆ ಈ ಹೊಸ ಫೀಚರ್ ನ್ನು ಪ್ರಸ್ತುತ ಪಡಿಸಿದೆ.
ವಾಟ್ಸಪ್ ನ ಸೆಟ್ಟಿಂಗ್ ನಲ್ಲಿ ಮೂರು ಆಯ್ಕೆಗಳಿದ್ದು , ಇದರಲ್ಲಿ ನೋಬಡಿ (nobody), ಮೈ ಕಾಂಟ್ಯಾಕ್ಟ್ (my contacts), ಅಥವಾ ಎಲ್ಲರೂ (everyone) ಆಯ್ಕೆಗಳಿವೆ. ಇದರಲ್ಲಿ ಯಾವುದಾದರೂ ಒಂದನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ನೀವು ’ನೋಬಡಿ ’ ಯನ್ನು ಆಯ್ಕೆ ಮಾಡಿಕೊಂಡರೆ ಯಾರಿಗೂ ಕೂಡಾ ನಿಮ್ಮನ್ನು ವಾಟ್ಸಪ್ ಗ್ರೂಪ್ ಗೆ ಸೇರಿಸಿಕೊಳ್ಳಲಾಗುವುದಿಲ್ಲ.
ಕೆಲವರು ಅನುಮತಿ ಪಡೆಯದೇ ಗ್ರೂಪ್ಗಳಲ್ಲಿ ಸುಖಾಸುಮ್ಮನೆ ಸೇರಿಸುತ್ತಾರೆ. ಹೊರಬಂದರೂ ಪುನ: ಸೇರಿಸುತ್ತಾರೆ, ಎಂಬ ದೂರುಗಳು ಬಂದಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ವರದಿಯಾಗಿದೆ. ವ್ಯಾಟ್ಸಾಪ್ ನ ಸದ್ಯದ ನಿಯಮಗಳ ಪ್ರಕಾರ ಯಾರನ್ನದಾರೂ ಗ್ರೂಪ್ಗೆ ಸೇರಿಸಬೇಕಾದರೆ, ಆ ವ್ಯಕ್ತಿಯ ನಂಬರ್ ಅಡ್ಮಿನ್ನ ಫೋನ್ಬುಕ್ನಲ್ಲಿ ಸೇವ್ ಆಗಿರಬೇಕು. ಗ್ರೂಪ್ನಿಂದ ಸದಸ್ಯನೊಬ್ಬ 2ನೇ ಬಾರಿ ಹೊರಹೋದರೆ, 3ನೇ ಬಾರಿ ಆತ/ಆಕೆಯನ್ನು ಗ್ರೂಪ್ಗೆ ಸೇರಿಸುವಂತಿಲ್ಲ.ಆದರೆ, ಅದಕ್ಕೂ ಕೆಲ ಕಳ್ಳದಾರಿಗಳನ್ನು ಕೆಲವರು ಹುಡುಕಿಕೊಂಡಿದ್ದಾರೆ. ಇನ್ನೊರ್ವ ಅಡ್ಮಿನ್ ಮೂಲಕ ಅಂಥವರನ್ನು ಮತ್ತೊಮ್ಮೆ ಆ ಗ್ರೂಪ್ಗೆ ಸೇರಿಸಬಹುದಾಗಿದೆ.
ಹೀಗಾಗಿ ಈಗಿನ ಹೊಸ ಫೀಚರ್ ನಂತೆ ವ್ಯಾಟ್ಸಾಪ್ ನಲ್ಲಿ ಯಾರನ್ನಾದರೂ ಗ್ರೂಪ್ ಗೆ ಸೇರಿಸುವ ಮುನ್ನ ಆ ವ್ಯಕ್ತಿಗೆ ಮೊದಲು ಖಾಸಗಿಯಾಗಿ ಅನುಮತಿ ಮೆಸೇಜ್ ನ್ನು ಕಳುಹಿಸಿಬೇಕಾಗುತ್ತದೆ. ಈ ಮೆಸೇಜ್ ಗೆ ನಿಗದಿತ ಅವಧಿ ಇದ್ದು, ಈ ಅವಧಿಯೊಳಗೆ ಗ್ರೂಪ್ ಗೆ ಸೇರ್ಪಡೆಯಾಗುವ ವ್ಯಕ್ತಿಯೂ ಅನುಮತಿ ನೀಡಬೇಕಾಗುತ್ತದೆ.
ವಾಟ್ಸಪ್ ನ ಹೊಸ ಫೀಚರ್ ವಾಟ್ಸಪ್ ಅಪ್ಡೇಟ್ ಮಾಡಿಕೊಂಡರೆ ಬುಧವಾರದಿಂದಲೇ ಲಭ್ಯವಾಗಲಿದೆ.