ಹುಬ್ಬಳ್ಳಿ, ಜು 16 (DaijiworldNews/MS): ಪ್ರಧಾನಿ ನರೇಂದ್ರ ಮೋದಿ ಅವರನ್ನು ಮಣಿಸುವ ಏಕೈಕ ಉದ್ದೇಶದಿಂದ ಪ್ರತಿಪಕ್ಷಗಳು ಒಂದಾಗುತ್ತಿವೆ. ಪ್ರತಿಕ್ಷಗಳ ಸಭೆಯಿಂದ ಯಾವುದೇ ರಾಜಕೀಯ ಲಾಭವಾಗುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರತಿ ಪಕ್ಷಗಳು ನಾಳೆಯಿಂದ ಎರಡು ದಿನಗಳ ಕಾಲ ಬೆಂಗಳೂರಲ್ಲಿ ಸಭೆ ಮಾಡುತ್ತಿವೆ. ಆದರೆ ಇಡೀ ಭಾರತದಲ್ಲಿ ಪ್ರತಿ ಪಕ್ಷಗಳು ಶಕ್ತಿಯುಯವಾಗಿಲ್ಲ. ಪ್ರತಿ ಪಕ್ಷಗಳಲ್ಲಿ ಪ್ರಾದೇಶಿಕ ಪಕ್ಷಗಳೇ ಹೆಚ್ಚಿವೆ. ಅವು ಆಯಾ ರಾಜ್ಯಗಳಲ್ಲಿ ಪ್ರತಿಪಕ್ಷಗಳಾಗಿ ಕೆಲಸ ಮಾಡುತ್ತಿವೆ. ಒಕ್ಕೂಟ ರಚನೆಯಿಂದ, ನಾಳೆ ನಡೆಯುವ ಪ್ರತಿಪಕ್ಷ ಸಭೆಯಿಂದ ಯಾವುದೇ ರಾಜಕೀಯ ಲಾಭ ಆಗುವುದಿಲ್ಲ ಎಂದು ಹೇಳಿದರು.
ಮೋದಿಯವರನ್ನ ಸೋಲಿಸಬೇಕೆಂದು ಪ್ರತಿಪಕ್ಷಗಳ ನಾಯಕರು ಒಗ್ಗಟ್ಟಾಗುತ್ತಿದ್ದಾರೆ. ಅದು ಸಾಧ್ಯವಿಲ್ಲದ ಮಾತು ಪ್ರತಿ ಪಕ್ಷಗಳಿಗೆ ಯಾವುದೇ ಸ್ವಂತ ಬಲವಿಲ್ಲ, ನಿರ್ಧಿಷ್ಟವಾದ ಕಾರ್ಯಕ್ರಮವಿಲ್ಲ. ಭಾರತ ದೇಶ ಜಗತ್ತಿನಲ್ಲಿ ಆರ್ಥಿಕವಾಗಿ, ಸಾಮಾಜಿಕವಾಗಿ ಸದೃಢವಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ನರೇಂದ್ರ ಮೋದಿಯವರಿಗೆ ಗೌರವ, ಮನ್ನಣೆ ಸಿಗುತ್ತಿದೆ ಎಂದು ಹೇಳಿದರು.
ಮಾಜಿ ಸಚಿವ ವಿ. ಸೋಮಣ್ಣ ಕಾಂಗ್ರೆಸ್ ಸೇರ್ಪಡೆ ಆಗುವುದು ಕೇವಲ ಊಹಾಪೋಹ ಎಂದು ಹೇಳಿದರು.
ಗೃಹಲಕ್ಷ್ಮಿ ಯೋಜನೆ ಉದ್ಘಾಟನೆಗೆ ಎಐಸಿಸಿ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಬರುದ್ದಾರೆ. ಗೃಹ ಲಕ್ಷ್ಮಿ ಈಗಾಗಲೇ ಯಡವಟ್ಟಾಗಿದೆ. ದಿನಾಂಕದ ಮೇಲೆ ದಿನಾಂಕ ಮುಂದುಡುತ್ತಿದ್ದಾರೆ. ಗೃಹಲಕ್ಷ್ಮಿ ಯೋಜನೆಗಳಿಗೆ ಯಾವುದೇ ನಿರ್ಧಿಷ್ಟವಾದ ನಿಯಮಗಳನ್ನ ಮಾಡುತ್ತಿಲ್ಲ. ದೊಡ್ಡ ಭಾರ ಆಗುತ್ತಿರುವ ಗೃಹಲಕ್ಷ್ಮಿ ಯೋಜನೆಯನ್ನು ಸಂಪೂರ್ಣವಾಗಿ ಅನುಷ್ಠಾನ ಮಾಡುವ ಉದ್ದೇಶ ಸರ್ಕಾರಕ್ಕಿಲ್ಲ. ದಿನಾಂಕ ಮುಂದೆ ಹಾಕಿ ಕೆಲವೇ ಸಮಯದಲ್ಲಿ, ಕೆಲವರಿಗೆ ಮಾತ್ರ ಪ್ರಾರಂಭ ಮಾಡುವ ಉದ್ದೇಶ ಸರ್ಕಾರಕ್ಕಿದೆ. ತಾಯಂದಿರಿಗೆ, ರಾಜ್ಯದ ಹೆಣ್ಣುಮಕ್ಕಳಿಗೆ ಭ್ರಮನಿರಸನ ಮಾಡುವಂತಹ ಉದ್ದೇಶ ಈ ಯೋಜನೆ ಹಿಂದಿದೆ. ಅಧಿವೇಶನದಲ್ಲಿ ಈ ಎಲ್ಲ ವಿಷಯಗಳ ಬಗ್ಗೆ ಗಂಭೀರ ಚರ್ಚೆ ನಡೆಯುತ್ತಿವೆ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.