ಬೆಂಗಳೂರು, ಜು 16 (DaijiworldNews/HR): ಜೆಡಿಎಸ್ ಅವಕಾಶವಾದಿ ಪಕ್ಷ, ಅಧಿಕಾರಕ್ಕಾಗಿ ಯಾರ ಜೊತೆಗಾದರೂ ಸೈ ಎಂದು ದಿನೇಶ್ ಗುಂಡೂರಾವ್ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಬಿಜೆಪಿಯ ಬಿ ಟೀಂ ಜೆಡಿಎಸ್ ಎಂದು ನಾವು ಅನೇಕ ಬಾರಿ ಹೇಳಿದ್ದೆವು. ಈಗ ಕುಮರಸ್ವಾಮಿ ನಮ್ಮ ಮಾತು ಸತ್ಯ ಎಂಬುದನ್ನು ನಿರೂಪಿಸಲು ಹೊರಟಿದ್ದಾರೆ. ಜೆಡಿಎಸ್ ಪಕ್ಷಕ್ಕೆ ಯಾವುದೇ ತತ್ವ ಸಿದ್ದಾಂತಗಳಿಲ್ಲ. ಕೋಮುವಾದಿ ಪಕ್ಷ ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಳ್ಳಲು ಹೊರಟಿರುವ ಜೆಡಿಎಸ್ಗೆ ಯಾವ ಸಿದ್ದಾಂತವಿದೆ? ಅದೊಂದು ಅವಕಾಶವಾದಿ ಪಕ್ಷ. ಅಧಿಕಾರಕ್ಕಾಗಿ ಯಾರ ಜೊತೆಗಾದರೂ ಸೈ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜೆಡಿಎಸ್ ಮುಂದಿರುವ ಜಾತ್ಯಾತೀತ ಎಂಬ ಪದ ಕೇವಲ ಸೋಗಲಾಡಿತನವಷ್ಟೆ. 2006 ರಲ್ಲಿ ಬಿಜೆಪಿ ಜೊತೆ ಸೇರಿ 20-20 ಸರ್ಕಾರ ಮಾಡಿದಾಗಲೇ ಜಾತ್ಯಾತೀತ ತತ್ವಕ್ಕೆ ಜೆಡಿಎಸ್ ಎಳ್ಳು ನೀರು ಬಿಟ್ಟಿದ್ದರು. ಆಗಲೇ ಜೆಡಿಎಸ್ ನ ಅವನತಿ ಶುರುವಾಗಿದ್ದು. 2004ರಲ್ಲಿ 59 ಸ್ಥಾನ ಗೆದ್ದಿದ್ದ ಜೆಡಿಎಸ್ ಈ ಬಾರಿ 19 ಸ್ಥಾನಕ್ಕೆ ಕುಸಿಯಲು ಈ ನಕಲಿ ಜಾತ್ಯಾತೀತ ಸಿದ್ದಾಂತವೇ ಕಾರಣ ಎಂದರು.
ಇನ್ನು ಬಿಜೆಪಿಗೆ ವಿಪಕ್ಷ ನಾಯಕನ ಎರವಲು ಸೇವೆ ನೀಡುತ್ತಿರುವ ಕುಮರಸ್ವಾಮಿ, ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವ ಬದಲು ವಿಲೀನ ಮಾಡಿಕೊಳ್ಳಲಿ. ಆಗ ತಾವೇ ಅಧಿಕೃತವಾಗಿ ವಿಪಕ್ಷ ನಾಯಕನಾಗಬಹುದು. ಈ ಮೂಲಕವಾದರೂ ಕುಮರಸ್ವಾಮಿಯವರ ಸುಳ್ಳು ಜಾತ್ಯಾತೀತತೆಯ ನಕಲಿ ಶ್ಯಾಮನ ಅವತಾರ ಕೊನೆಯಾಗಲಿ ಎಂದು ಹೇಳಿದ್ದಾರೆ.