ಭೋಪಾಲ್, ಜು 16 (DaijiworldNews/HR): ಮಧ್ಯಪ್ರದೇಶದ ಶಾಹದೋಲ್ ಜಿಲ್ಲೆಯಲ್ಲಿ ಸಾಂಬಾರಿಗೆ 2 ಟೊಮೆಟೋ ಹಾಕಿದ್ದಕ್ಕೇ ಕೋಪಗೊಂಡು ಗಂಡನನ್ನು ಬಿಟ್ಟು ಮನೆ ಬಿಟ್ಟು ಹೋಗಿದ್ದ ಪತ್ನಿ ಕೊನೆಗೆ ಟೊಮೆಟೋ ಕಾರಣದಿಂದಲೇ ಮನೆಗೆ ವಾಪಸ್ಸಾಗಿರುವ ಅಪರೂಪದ ಘಟನೆ ನಡೆದಿದೆ.
ಟೊಮೆಟೊ ಬೆಲೆ ಗಗನಕ್ಕೇರುತ್ತಿರುವ ನಡುವೆ ತನ್ನನ್ನು ಕೇಳದೇ ಸಾಂಬಾರಿನಲ್ಲಿ ಟೊಮೆಟೊ ಬಳಸಿದಕ್ಕೆ ಗಂಡನ ಜೊತೆ ಜಗಳವಾಡಿದ ಹೆಂಡತಿ ಕೊನೆಗೆ ಮನೆಯನ್ನೇ ತೊರೆದು ಕಾಣೆಯಾಗಿರುವ ಘಟನೆ ನಡೆದಿತ್ತು.
ಇನ್ನು ಸಂಜೀವ್ ಬರ್ಮನ್ ದಂಪತಿ ಶಾಹದೋಲ್ನಲ್ಲಿ ಸಣ್ಣ ಹೋಟೆಲ್ವೊಂದನ್ನು ನಡೆಸುದ್ದು, ಸಂಜೀವ್ ಬರ್ಮನ್ ಇತ್ತೀಚೆಗೆ ಅಡುಗೆ ಮಾಡುವಾಗ ಹೆಂಡತಿಯನ್ನು ಕೇಳದೇ ಎರಡೇ ಎರಡು ಟೊಮೆಟೊ ಹಣ್ಣುಗಳನ್ನು ಅಡುಗೆಗೆ ಬಳಸಿದ್ದಾರೆ. ಇಷ್ಟಕ್ಕೇ ಸಿಟ್ಟಾದ ಪತ್ನಿ ಪತಿಯೊಂದಿಗೆ ಜಗಳ ತೆಗೆದು ಮಗುವಿನ ಜೊತೆ ಮನೆ ಬಿಟ್ಟು ಹೋಗಿದ್ದಾಳೆ.
ಈ ವಿಚಾರಕ್ಕೆ ಮನೆ ಬಿಟ್ಟು ಹೋದ ಪತ್ನಿಯನ್ನು ಸಂಜೀವ್ ಬರ್ಮನ್ ಹುಡುಕಿದ್ದಾರೆ. ಆದರೆ ಆಕೆ ಎಲ್ಲಿಯೂ ಪತ್ತೆಯಾಗದ ಕಾರಣ ಪೊಲೀಸರಿಗೆ ದೂರು ನೀಡಿದ್ದು ಇದೀಗ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆಕೆಗಾಗಿ ಶೋಧ ನಡೆಸಿ ಕೊನೆಗೆ ಆಕೆಯ ಸಹೋದರಿ ಮೂಲಕ ಆಕೆಯನ್ನು ಸಂಪರ್ಕಿಸಿ ಧನಪುರಿ ಪೊಲೀಸ್ ಠಾಣೆಗೆ ಕರೆಸಿ ಸಂಧಾನ ನಡೆಸಿದ್ದಾರೆ.
ಇನ್ನು ಸಂಧಾನದ ವೇಳೆ ಪತಿ ಅರ್ಧಕೆಜಿ ಟೊಮೆಟೋವನ್ನು ಪತ್ನಿಗೆ ನೀಡಿ ಮುಂದೆ ಇಂತಹ ತಪ್ಪುಗಳಾಗುವುದಿಲ್ಲ ಎಂದು ಕೇಳಿಕೊಂಡ ಬಳಿಕ ಮತ್ತೆ ಮನೆಗೆ ಬರಲು ಪತ್ನಿ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.