ಚಂಡೀಗಡ, ಜು 15 (DaijiworldNews/AK): ಪ್ರವಾಹ ಪೀಡಿತ ದೆಹಲಿಗೆ ಉದ್ದೇಶಪೂರ್ವಕವಾಗಿ ಹತ್ನಿಕುಂಡ್ ಬ್ಯಾರೇಜ್ ಮೂಲಕ ನೀರನ್ನು ಬಿಡಲಾಗಿದೆ. ಈ ಮೂಲಕ ಹರಿಯಾಣ ಸರ್ಕಾರವನ್ನು ಬಿಜೆಪಿ ಬಳಸಿಕೊಳ್ಳುತ್ತಿದೆ ಎಂದು ಆಮ್ ಆದ್ಮಿ ಪಕ್ಷ ಆರೋಪಿಸಿದೆ.
ಕೇಂದ್ರ ಜಲ ಆಯೋಗದ ಮಾರ್ಗಸೂಚಿ ಪ್ರಕಾರ 1 ಲಕ್ಷ ಕ್ಯೂಸೆಕ್ಗಿಂತ ಹೆಚ್ಚಿನ ನೀರನ್ನು ಪಶ್ಚಿಮ ಯಮುನಾ ಮತ್ತು ಪೂರ್ವ ಯಮುನಾ ಕಾಲುವೆಗೆ ಬಿಡುವಂತಿಲ್ಲ ಎಂದು ದೆಹಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಟ್ವಿಟರ್ನಲ್ಲಿ ತಿಳಿಸಿದೆ.
ಆದರೆ ಪಶ್ಚಿಮ ಯಮುನಾ ಕಾಲುವೆ ಮತ್ತು ಪೂರ್ವ ಯಮುನಾ ಕಾಲುವೆಗೆ ನೀರು ಬಿಡದೆ ಹತ್ನಿಕುಂಡ್ ಬ್ಯಾರೇಜ್ನಿಂದ ಯಮುನಾ ನದಿಗೆ ನೀರು ಬಿಡಲಾಗುತ್ತಿದೆ. ಇದು ದೆಹಲಿಯ ಪ್ರವಾಹಕ್ಕೆ ಕಾರಣವಾಗಿದೆ ಎಂದು ಎಎಪಿ ಪಕ್ಷದ ಮುಖಂಡರು ಆರೋಪಿಸಿದ್ದಾರೆ.
ಹತ್ನಿಕುಂಡ್ ಬ್ಯಾರೇಜ್ನಲ್ಲಿ 1 ಲಕ್ಷ ಕ್ಯೂಸೆಕ್ಗಿಂತ ಹೆಚ್ಚಿನ ನೀರಿನ ಹರಿವು ಇದ್ದರೆ ಪಶ್ಚಿಮ ಯಮುನಾ ಮತ್ತು ಪೂರ್ವ ಯಮುನಾ ಕಾಲುವೆಗೆ ನೀರು ಹರಿಯುತ್ತದೆ. ಆದರೆ ದೆಹಲಿ ಸರ್ಕಾರ ತನ್ನ ವೈಫಲ್ಯವನ್ನು ಮುಚ್ಚಿಡಲು ಅನಗತ್ಯ ಆರೋಪ ಮಾಡುತ್ತಿದೆ ಎಂದು ಹರಿಯಾಣದ ನೀರಾವರಿ ಸಲಹೆಗಾರ ದೇವೇಂದ್ರ ಸಿಂಗ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಳೆದ ಮೂರು ದಿನಗಳಿಂದ ಮಳೆ ಆಗದಿದ್ದರೂ ಯಮುನೆಯ ನೀರಿನ ಮಟ್ಟ ನಿರಂತರವಾಗಿ ಏರಿಕೆಯಾಗುತ್ತಿದೆ. ನಗರದ ತಗ್ಗು ಪ್ರದೇಶದಲ್ಲಿರುವ ಕೆಲವು ಭಾಗಗಳಿಗೆ ನೀರು ನುಗ್ಗಿರುವುದು ಏಕೆ ಎಂದು ಎಎಪಿ ಮುಖಂಡ ಸಂಜಯ್ ಸಿಂಗ್ ಪ್ರಶ್ನಿಸಿದ್ದಾರೆ.
ಹತ್ನಿಕುಂಡ್ ಬ್ಯಾರೇಜ್ನಲ್ಲಿ, ನೀರಿನ ಹರಿವಿಗೆ ಮೂರು ವಿಭಿನ್ನ ಮಾರ್ಗಗಳಿವೆ. ಒಂದು ಮಾರ್ಗ ನೀರನ್ನು ದೆಹಲಿಗೆ ತರುತ್ತದೆ. ಇನ್ನೊಂದು ಅದನ್ನು ಉತ್ತರ ಪ್ರದೇಶಕ್ಕೆ ಹೋಗುತ್ತದೆ. ಇಂತಹ ಪ್ರವಾಹದಲ್ಲಿ ಮೂರು ಕಾಲುವೆಗಳು ನೀರಿನ ಒತ್ತಡವನ್ನು ಸಮಾನವಾಗಿ ಹಂಚಿಕೆ ಮಾಡಿದ್ದರೆ ಸೂಕ್ತವಾಗಿತ್ತು. ಆದರೆ ಬಿಜೆಪಿಯು ದೆಹಲಿಯನ್ನು ಪ್ರವೇಶಿಸುವ ಹೊಳೆಗೆ ಎಲ್ಲಾ ನೀರನ್ನು ಕಳುಹಿಸಲು ಸಂಚು ರೂಪಿಸಿದೆ ಎಂದು ಅವರು ಆರೋಪಿಸಿದ್ದಾರೆ.