ಹಾಸನ,ಏ 03(MSP): ಚುನಾವಣಾ ಪ್ರಚಾರದಲ್ಲಿ ಬ್ಯುಸಿ ಆಗಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಬುಧವಾರ ಶಿವಮೊಗ್ಗದ ಕಡೆ ಪ್ರಯಾಣ ಬೆಳೆಸಿದ್ದಾರೆ. ಮಾರ್ಗ ಮಧ್ಯೆ ಸಿಗುವ ಹಾಸನದ ಚನ್ನರಾಯಪಟ್ಟಣಕ್ಕೆ ಸಿಎಂ ಕುಮಾರಸ್ವಾಮಿ ಆಗಮಿಸಿ ಅಲ್ಲಿನ ಸ್ಥಳೀಯ ಜೆಡಿಎಸ್ ಶಾಸಕರ ಮನೆಗೆ ಭೇಟಿ ಚುನಾವಣೆಯ ಪ್ರಯುಕ್ತ ಮಾತುಕತೆ ನಡೆಸಿದರು.
ಆ ಬಳಿಕ ಸಿಎಂ ಕುಮಾರಸ್ವಾಮಿ ಅಲ್ಲಿಯೇ ಉಪಹಾರ ಸೇವನೆ ಮಾಡಿ ಚುನಾವಣೆ ಗೆಲ್ಲುವ ಕಾರ್ಯತಂತ್ರಗಳ ಬಗ್ಗೆ ಹಾಸನ ಜಿಲ್ಲಾ ಜೆಡಿಎಸ್ ಆಪ್ತರೊಂದಿಗೆ ಗುಪ್ತ ಸಮಲೋಚನೆ ನಡೆಸಿದ್ರು.
ನಂತರ ಚನ್ನರಾಯಪಟ್ಟಣ ಮಾರ್ಗವಾಗಿ ಶಿವಮೊಗ್ಗಕ್ಕೆ ಪ್ರಯಾಣ ಬೆಳೆಸುವ ಸಂದರ್ಭ, ಹಾಸನ ಗಡಿಭಾಗದಲ್ಲಿರುವ ಹಿರಿಸಾವೆಯ ಚೆಕ್ ಪೋಸ್ಟ್ ಬಳಿ ಚುನಾವಣಾಧಿಕಾರಿಗಳು ಹಾಗೂ ಪೊಲೀಸರು ಕುಮಾರಸ್ವಾಮಿ ಅವರ ವಾಹನವನ್ನು ತಡೆದು ನಿಲ್ಲಿಸಿದರು. ಪೊಲೀಸರು ಹಾಗೂ ಚುನಾವಣಾಧಿಕಾರಿಗಳು ವಾಹನವನ್ನು ಕೂಲಂಕುಷವಾಗಿ ತಪಾಸಣೆ ನಡೆಸಿದರು. ಚುನಾವಣಾಧಿಕಾರಿಗಳ ತಪಾಸಣೆ ಮುಗಿಯುವವರೆಗೆ ಸುಮ್ಮನಿದ್ದು ಸಹಕಾರ ನೀಡಿದ ಮುಖ್ಯಮಂತ್ರಿ ಬಳಿಕ ಶಿವಮೊಗ್ಗದ ಕಡೆ ಪ್ರಯಾಣ ಬೆಳೆಸಿದರು.