ಹೈದರಾಬಾದ್, ಎ03(SS): ಬಲಿಷ್ಠ ಸರಕಾರ ಹಾಗೂ ಬಲಿಷ್ಠ ದೇಶಕ್ಕಾಗಿ ಈ 'ಚೌಕಿದಾರ'ನನ್ನು ಬೆಂಬಲಿಸಿ ಎಂದು ಪ್ರಧಾನಿ ಮೋದಿ ವಿನಂತಿಸಿದ್ದಾರೆ.
ಚುನಾವಣೆ ರ್ಯಾಲಿ ಉದ್ದೇಶಿಸಿ ಮಾತನಾಡಿದ ಅವರು, ಉಗ್ರರನ್ನು ಅವರ ಮನೆಗಳಿಗೇ ನುಗ್ಗಿ ಕೊಲ್ಲುವ ಸಾಮರ್ಥ್ಯ ಭಾರತಕ್ಕಿದೆ. ಭಾರತ ಇನ್ನು ಯಾವುದೇ ಭಯೋತ್ಪಾದಕರ ದಾಳಿಯನ್ನೂ ಸಹಿಸಿಕೊಳ್ಳುವುದಿಲ್ಲ. ಅದರ ವಿರುದ್ಧ ಹೇಗೆ ಪ್ರತಿಕ್ರಿಯಿಸಬೇಕು ಎಂಬುದು ಈಗ ಭಾರತಕ್ಕೆ ತಿಳಿದಿದೆ. ನಾವು ಅವರ ಮನೆಗಳಿಗೇ ನುಗ್ಗಿ ಭಯೋತ್ಪಾದಕರನ್ನು ಕೊಂದು ಹಾಕಬಲ್ಲೆವು ಎಂದು ತಿಳಿಸಿದ್ದಾರೆ.
ಏಪ್ರಿಲ್ 11ರಂದು ನಡೆಯುವ ಮತದಾನ ಕೇವಲ ಒಂದು ಪಕ್ಷದ ಗೆಲುವು ಅಥವಾ ಸೋಲನ್ನು ನಿರ್ಧರಿಸುವುದಲ್ಲ. ಬದಲಾಗಿ ಭಯೋತ್ಪಾದಕರಿಗೆ ತಕ್ಕ ಪ್ರತ್ಯುತ್ತರ ನೀಡಬೇಕೆ ಅಥವಾ ಸುಮ್ಮನಿರಬೇಕೆ ಎಂಬ ನೀತಿಯನ್ನು ಅಳವಡಿಸಿಕೊಳ್ಳುವ ಬಗ್ಗೆ ನಿರ್ಧರಿಸುವಂಥದ್ದಾಗಿರುತ್ತದೆ ಎಂದು ಹೇಳಿದ್ದಾರೆ.
ಉಗ್ರರು 40 ವರ್ಷಗಳಿಂದ ಪ್ರತಿದಿನ ನಮ್ಮವರನ್ನು ಕೊಲ್ಲುತ್ತಿದ್ದರು. ಆದರೂ ನಾವು ಸುಮ್ಮನೆ ಕುಳಿತಿದ್ದೆವು. ಏನಾದರೂ ಮಾಡಿಬಿಟ್ಟರೆ ನಮ್ಮ ವೋಟ್ ಬ್ಯಾಂಕ್ ನಷ್ಟವಾದೀತು ಎಂಬ ಭೀತಿ ಹಿಂದಿನ ಆಡಳಿತಗಾರರಿಗಿತ್ತು. ಇನ್ನು ಸಾಕೋ ಸಾಕು... ಇದನ್ನು ಸಹಿಸಿಕೊಳ್ಳಲು ಮೋದಿ ಇನ್ನು ಸಿದ್ಧವಿಲ್ಲ ಎಂದು ತಿಳಿಸಿದ್ದಾರೆ.
ಪ್ರತಿದಿನ ಭಾರತದಲ್ಲಿ ಬಾಂಬ್ಗಳು ಸ್ಫೋಟಿಸಬೇಕೆ ಅಥವಾ ಕಳೆದ 5 ವರ್ಷಗಳಲ್ಲಿ ಇದ್ದಂತೆ ಶಾಂತಿಯುತ ಭಾರತ ಬೇಕೆ ಎಂಬುದನ್ನೂ ಈ ಚುನಾವಣೆ ನಿರ್ಧರಿಸಲಿದೆ. ಈ ಚುನಾವಣೆ ಭಾರತದ ವೀರರನ್ನು ಗೌರವಿಸಬೇಕೆ ಅಥವಾ ಪಾಕ್ ಪರ ಶಕ್ತಿಗಳನ್ನು ಗೌರವಿಸಬೇಕೆ ಎಂಬುದನ್ನು ತಿಳಿಸಲಿದೆ ಎಂದು ಹೇಳಿದರು.