ನವದೆಹಲಿ, ಜು 13 (DaijiworldNews/MS): ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಗುರುವಾರ ಬೆಳಗ್ಗೆ ತಮ್ಮ ಫ್ರಾನ್ಸ್ ಪ್ರವಾಸ ಆರಂಭಿಸಿದ್ದಾರೆ. ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಅವರ ಆಹ್ವಾನದ ಮೇರೆಗೆ ಇಂದು ಬೆಳಿಗ್ಗೆ ಫ್ರಾನ್ಸ್ಗೆ ಪ್ರಯಾಣ ಬೆಳೆಸಿದ್ದಾರೆ.
ನಾಳೆ ಮೋದಿಯವರು ಫ್ರಾನ್ಸ್ ನ ವಾರ್ಷಿಕ ಬಾಸ್ಟಿಲ್ ಡೇ ಪರೇಡ್ನಲ್ಲಿ ಗೌರವಾನ್ವಿತ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಇದರಲ್ಲಿ 269 ಸದಸ್ಯರನ್ನೊಳಗೊಂಡ ಭಾರತೀಯ ಸೇನೆಯ ಮೂರೂ ಸೇವೆಗಳ ತುಕಡಿ ಭಾಗವಹಿಸಲಿವೆ.
ಫ್ರಾನ್ಸ್ ಪ್ರವಾಸ ಸಂದರ್ಭ ರಕ್ಷಣೆ ಮತ್ತು ಬಾಹ್ಯಾಕಾಶ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಭಾರತ - ಫ್ರಾನ್ಸ್ ಸಂಬಂಧಗಳನ್ನು ಬಲಪಡಿಸುವತ್ತ ಪ್ರಧಾನಿ ಮೋದಿ ಅವರು ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ.
ಇದಾದ ಬಳಿಕ ಪ್ರಧಾನಿ ಮೋದಿ ಫ್ರಾನ್ಸ್ ಪ್ರವಾಸದ ನಂತರ ಅಬುಧಾಬಿಗೆ ಪ್ರಯಾಣಿಸಲಿದ್ದಾರೆ. ತಮ್ಮ ಪ್ರವಾಸ ಕುರಿತು ಇಂದು ಬೆಳಗ್ಗೆ ಟ್ವೀಟ್ ಮಾಡಿರುವ ಪ್ರಧಾನ ಮಂತ್ರಿಗಳು, "ಪ್ಯಾರಿಸ್ಗೆನಲ್ಲಿ ಬಾಸ್ಟಿಲ್ ಡೇ ಆಚರಣೆಯಲ್ಲಿ ಪಾಲ್ಗೊಳ್ಳುತ್ತೇನೆ. ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಮತ್ತು ಇತರ ಫ್ರೆಂಚ್ ಗಣ್ಯರೊಂದಿಗೆ ಹಲವು ಫಲಪ್ರದ ಚರ್ಚೆಗಳನ್ನು ಎದುರು ನೋಡುತ್ತಿದ್ದೇನೆ. ಭಾರತೀಯ ಸಮುದಾಯವನ್ನು ಭೇಟಿ ಮಾಡುವುದು, ಉನ್ನತ ಸಿಇಒಗಳೊಂದಿಗೆ ಸಂವಾದವನ್ನು ನನ್ನ ಪ್ರವಾಸದಲ್ಲಿ ಒಳಗೊಂಡಿವೆ." ಎಂದು ಬರೆದುಕೊಂಡಿದ್ದಾರೆ.