ಬೆಂಗಳೂರು, ಜು 13 (DaijiworldNews/MS): ರಾಜರಾಜೇಶ್ವರಿ ನಗರದ ಶಾಸಕ ಎನ್ ಮುನಿರತ್ನ ವಿರುದ್ದ ಚಿಕ್ಕಾಜಾಲ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಅನುಮತಿ ಪಡೆಯದೆ ಅಕ್ರಮವಾಗಿ ಜಿಲೆಟಿನ್ ಸ್ಪೋಟಿಸಿದ ಆರೋಪದ ಮೇಲೆ ಶಾಸಕ ಮುನಿರತ್ನ ಸೇರಿದಂತೆ ನಾಲ್ವರ ವಿರುದ್ಧ ಯಲಹಂಕ ತಹಶೀಲ್ದಾರ್ ಅನಿಲ್ ಅರಳೋಕರ್ ದೂರಿನ ಮೇರೆಗೆ ಎಫ್ಐಆರ್ ದಾಖಲಾಗಿದೆ.
ಬೆಂಗಳೂರು ಉತ್ತರದದ ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಹುಣಸಮಾರನಹಳ್ಳಿಯಲ್ಲಿ ಜಮೀನಿನಲ್ಲಿ ಕಲ್ಲು ಗಣಿಗಾರಿಕೆ ಮಾಡಿದ್ದು, ಜೊತೆಗೆ ಅಕ್ರಮವಾಗಿ ಜಿಲೆಟಿನ್ ಸ್ಪೋಟಿಸಲಾಗಿತ್ತು.ಈ ಬಗ್ಗೆ ಹುಣಸಮಾರನಹಳ್ಳಿ ಗ್ರಾಮದ ಜನರು ಅಕ್ರಮ ಜಿಲೆಟಿನ್ ಸ್ಪೋಟ ತಡೆಗೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಧರಣಿ, ಪ್ರತಿಭಟನೆ ನಡೆಸಿದ್ದರು.
ಈ ಹಿನ್ನಲೆಯಲ್ಲಿ ಸ್ಥಳಕ್ಕೆ ಯಲಹಂಕ ತಹಶೀಲ್ದಾರ್ ಅನಿಲ್ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದರು. ಈ ವೇಳೆ ಅಕ್ರಮವಾಗಿ ಜಿಲೆಟಿನ್ ಸ್ಪೋಟಗೊಳಿಸಿರುವುದು ಪತ್ತೆಯಾಗಿತ್ತು. ಹೀಗಾಗಿ ತಹಶೀಲ್ದಾರ್ ಜುಲೈ.10ರಂದು ಬ್ಲಾಸ್ಟಿಂಗ್ ಮಾಡಿದ ಆರೋಪದ ಮೇರೆಗೆ ಶಾಸಕ ಮುನಿರತ್ನ ಇತರ ಆರೋಪಿಗಳಾದ ಆನಂದನ್ , ಗಣೇಶ್, ರಾಧಮ್ಮ ವಿರುದ್ಧ ದೂರು ನೀಡಿದ್ದರು. ಅವರ ದೂರಿನ ಮೇರೆಗೆ ಈಗ ಎಫ್ಐಆರ್ ದಾಖಲಾಗಿದೆ.