ಕೋಲ್ಕತ್ತಾ, ಜು 11 (DaijiworldNews/SM): ಇತ್ತೀಚಿಗಷ್ಟೇ ಚುನಾವಣಾ ಹಿಂಸಾಚಾರದಿಂದ ಸುದ್ದಿಯಾಗಿದ್ದ ಪಶ್ಚಿಮ ಬಂಗಾಳದಲ್ಲಿ ಸ್ಥಳೀಯಾಡಳಿತಗಳ ಮೇಲೂ ಆಡಳಿತರೂಢ ಟಿಎಂಸಿ ಪ್ರಾಬಲ್ಯ ಮೆರೆದಿದೆ. ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಟಿಎಂಸಿ ಭರ್ಜರಿ ಗೆಲುವು ದಾಖಲಿಸಿಕೊಂಡಿದೆ.
ಪಂಚಾಯಿತ್ ಚುನಾವಣೆಯ ಮತ ಎಣಿಕೆ ನಡೆಯುತ್ತಿದ್ದು, ಈವರೆಗೆ ಆಡಳಿತಾರೂಢ ತೃಣಮೂಲ ಕಾಂಗ್ರೆಸ್(ಟಿಎಂಸಿ) ಒಟ್ಟು 63,229 ಸ್ಥಾನಗಳ ಪೈಕಿ 14,767 ಗ್ರಾಮ ಪಂಚಾಯಿತಿ ಸ್ಥಾನಗಳನ್ನು ಗೆದ್ದಿದೆ. ಬಿಜೆಪಿ 3,344 ಸ್ಥಾನಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ರಾಜ್ಯ ಚುನಾವಣಾ ಆಯೋಗದ (ಎಸ್ಇಸಿ) ವೆಬ್ಸೈಟ್ನ ಪ್ರಕಾರ, ಮತಗಳ ಎಣಿಕೆ ಮುಂದುವರೆದಿದ್ದು, ಸಿಪಿಎಂ 1,086 ಗ್ರಾಮ ಪಂಚಾಯತ್ ಸ್ಥಾನಗಳನ್ನು ಗೆದ್ದರೆ, ಕಾಂಗ್ರೆಸ್ 783 ಸ್ಥಾನಗಳನ್ನು ಮತ್ತು ಸ್ವತಂತ್ರ ಅಭ್ಯರ್ಥಿಗಳು 854 ಸ್ಥಾನಗಳನ್ನು ಗೆದ್ದಿದ್ದಾರೆ ಎಂದು ತಿಳಿಸಿದೆ.
ಚುನಾವಣೆ ಸಂದರ್ಭದಲ್ಲೇ ಹಿಂಸಾಚಾರ ನಡೆದ ಹಿನ್ನೆಲೆಯಲ್ಲಿ ಮತಎಣಿಕೆ ದಿನ ಎಣಿಕಾಕೇಂದ್ರ ಸೇರಿದಂತೆ ಎಲ್ಲೆಡೆ ಬಿಗು ಬಂದೋಬಸ್ತ್ ಏರ್ಪಡಿಸಲಾಗಿತ್ತು. ಬಿಗಿ ಭದ್ರತೆಯ ನಡುವೆ 339 ಮತ ಎಣಿಕೆ ಕೇಂದ್ರಗಳಲ್ಲಿ ಮೂರು ಹಂತದ ಪಶ್ಚಿಮ ಬಂಗಾಳ ಪಂಚಾಯತ್ ಚುನಾವಣೆಗಳ ಮತ ಎಣಿಕೆ ನಡೆಯುತ್ತಿದೆ. ಆರಂಭಿಕ ವರದಿಗಳು ಮತ್ತು ಫಲಿತಾಂಶಗಳ ಪ್ರಕಾರ ಪಶ್ಚಿಮ ಬಂಗಾಳದ ಒಟ್ಟು 3,317 ಗ್ರಾಮ ಪಂಚಾಯತ್ಗಳ ಪೈಕಿ 1,783 ರಲ್ಲಿ ತೃಣಮೂಲ ಕಾಂಗ್ರೆಸ್ ಮುನ್ನಡೆ ಸಾಧಿಸಿದೆ. ಬಿಜೆಪಿ 262 ಗ್ರಾಮ ಪಂಚಾಯಿತಿಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಕಾಂಗ್ರೆಸ್ 137 ಮತ್ತು ಎಡರಂಗ 112 ಗ್ರಾಮ ಪಂಚಾಯಿತಿಗಳಲ್ಲಿ ಮುನ್ನಡೆ ಸಾಧಿಸಿತ್ತು. 14 ಗ್ರಾಮ ಪಂಚಾಯಿತಿಗಳಲ್ಲಿ ಐಎಸ್ಎಫ್ ಮುನ್ನಡೆ ಸಾಧಿಸಿದೆ.
ಎಸ್ಇಸಿ ವೆಬ್ಸೈಟ್ ಪ್ರಕಾರ 74 ಗ್ರಾಮ ಪಂಚಾಯತ್ಗಳಲ್ಲಿ ಸ್ವತಂತ್ರ ಅಭ್ಯರ್ಥಿಗಳು ಸೇರಿದಂತೆ ಇತರ ಪಕ್ಷಗಳು ಮುನ್ನಡೆ ಸಾಧಿಸಿವೆ.