ಬೆಂಗಳೂರು, ಜು 10 (DaijiworldNews/MS): ವಿಧಾನಸಭೆಯ ಪ್ರವೇಶಿಸಿದ್ದ ಅಪರಿಚಿತ ವ್ಯಕ್ತಿಯನ್ನು ಪತ್ತೆ ಹಚ್ಚಿ ವಿಧಾನಸೌಧ ಪೊಲೀಸ್ ಠಾಣೆಗೆ ಒಪ್ಪಿಸಿದ್ದು, ಪೊಲೀಸರು ಮುಂದಿನ ವಿಚಾರಣೆ ನಡೆಸುತ್ತಿದ್ದಾರೆ ಎಂದು ಸದನಕ್ಕೆ ಸ್ಪೀಕರ್ ಯು ಟಿ ಖಾದರ್ ಮಾಹಿತಿ ನೀಡಿದರು.
ಜೆಡಿಎಸ್ ಶಾಸಕಿ ಕರೆಮ್ಮ ಅವರಿಗೆ ಮೀಸಲಾದ ಸ್ಥಾನದಲ್ಲಿ ಕುಳಿತಿದ್ದ ಅಪರಿಚಿತ ವ್ಯಕ್ತಿಯನ್ನು ಪತ್ತೆ ಹಚ್ಚಿಈಗಾಗಲೇ ಅವರ ವಿರುದ್ಧ ಕಾನೂನಾತ್ಮಕ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚನೆ ನೀಡಲಾಗಿದೆ. ಈ ಘಟನೆ ಹಿನ್ನೆಲೆಯಲ್ಲಿ ಇನ್ನು ಮುಂದೆ ಶಾಸಕರು, ಸಚಿವರು ಮತ್ತು ಮಾಧ್ಯಮದವರು ಭದ್ರತಾ ಸಿಬ್ಬಂದಿಗೆ ತಮ್ಮ ಗುರುತಿನ ಚೀಟಿ ತೋರಿಸಿ ಒಳ ಬರಬೇಕು. ಭದ್ರತಾ ಸಿಬ್ಬಂದಿ ಜೊತೆ ಸಹಕರಿಸಬೇಕು. ಯಾರೂ ಪ್ರತಿಷ್ಠೆಯ ಪ್ರಶ್ನೆಯನ್ನಾಗಿ ಮಾಡಿಕೊಳ್ಳಬಾರದು ಎಂದು ಸ್ಪೀಕರ್ ಮನವಿ ಮಾಡಿದರು.
ಈ ಘಟನೆಯಿಂದ ದೇವರೇ ಅವರ ಮೂಲಕ ನಮ್ಮೆಲ್ಲರ ಕಣ್ಣು ತೆರೆಸಿದ್ದಾರೆ. ಇನ್ಮುಂದೆ ನಾವು ಜಾಗೃತರಾಗರಾಬೇಕು. ನನ್ನನ್ನು ಸೇರಿಸಿ ತಪಾಸಣೆ ಗೆ ಒಳಪಟ್ಟು ಬರಬೇಕು. ಇದರ ಬಗ್ಗೆ ಇಲಾಖೆಯ ಜೊತೆ ಚರ್ಚಿಸಲಾಗಿದೆ. ನೂತನವಾದ ತಂತ್ರಜ್ಞಾನದಲ್ಲಿ ಭದ್ರತೆ ಕಲ್ಪಿಸಲು ಸೂಚನೆ ನೀಡಲಾಗಿದೆ. ಸದನದಲ್ಲಿ ಸ್ಪೀಕರ್ ವಿವರ ನೀಡಿದರು.