ನವದೆಹಲಿ, ಜು 10 (DaijiworldNews/HR): ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧಿತರಾಗಿರುವ ದೆಹಲಿಯ ಮಾಜಿ ಸಚಿವ ಸತ್ಯೇಂದ್ರ ಜೈನ್ ಅವರಿಗೆ ನೀಡಲಾಗಿದ್ದಮಧ್ಯಂತರ ಜಾಮೀನು ಅವಧಿಯನ್ನು ಜುಲೈ 24 ರವರೆಗೆ ಸುಪ್ರೀಂಕೋರ್ಟ್ ವಿಸ್ತರಿಸಿದೆ.
ಸತ್ಯೇಂದ್ರ ಜೈನ್ ಅವರಿಗೆ ವೈದ್ಯಕೀಯ ಕಾರಣಗಳಿಗಾಗಿ ಅವರಿಗೆ ಜಾಮೀನು ನೀಡಲಾಗಿದ್ದು, ನ್ಯಾ. ಎಎಸ್ ಬೋಪಣ್ಣ ಮತ್ತು ಎಂಎಂ ಸುಂದ್ರೇಶ್ ಅವರ ಪೀಠವು ಜೈನ್ ಪರ ಹಾಜರಿದ್ದ ಹಿರಿಯ ವಕೀಲ ಅಭಿಷೇಕ್ ಸಿಂಘ್ವಿ ಅವರಿಗೆ ವೈದ್ಯಕೀಯ ವರದಿಗಳನ್ನು ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್ ವಿ ರಾಜು ಅವರಿಗೆ ಸಲ್ಲಿಸುವಂತೆ ಸೂಚಿಸಿದೆ.
ಇನ್ನು ವೈದ್ಯಕೀಯ ಕಾರಣಗಳಿಗಾಗಿ ಮೇ 26 ರಂದು ಜೈನ್ ಅವರಿಗೆ ಆರು ವಾರಗಳ ಮಧ್ಯಂತರ ಜಾಮೀನು ನೀಡಿದ್ದ ಸುಪ್ರೀಂಕೋರ್ಟ್, ತನ್ನ ಸ್ವಂತ ಖರ್ಚಿನಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ತನ್ನ ಇಚ್ಛೆಯ ಚಿಕಿತ್ಸೆಯನ್ನು ಪಡೆಯುವ ಹಕ್ಕು ನಾಗರಿಕನಿಗೆ ಇದೆ ಎಂದು ಹೇಳಿದೆ.
ನಾಲ್ಕು ಕಂಪನಿಗಳ ಮೂಲಕ ಅಕ್ರಮವಾಗಿ ಹಣ ವರ್ಗಾವಣೆ ಮಾಡಿದ ಆರೋಪದ ಮೇಲೆ ಸತ್ಯೇಂದ್ರ ಜೈನ್ ಅವರನ್ನು ಕಳೆದ ವರ್ಷ ಮೇ 30 ರಂದು ಇಡಿ ಜೈನ್ ಅವರನ್ನು ಬಂಧಿಸಿತ್ತು