ಬೆಂಗಳೂರು, ಜು 10 (DaijiworldNews/HR): ಟೊಮ್ಯಾಟೋ ದರ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ಟೊಮ್ಯಾಟೋ ಸಾಗಿಸುತ್ತಿದ್ದ ವಾಹನವನ್ನೇ ಖದೀಮರು ಅಪಹರಿಸಿರುವ ಘಟನೆ ಬೆಂಗಳೂರಿನ ಪೀಣ್ಯ ಬಳಿ ನಡೆದಿದೆ.
ಇನ್ನು ಬೆಂಗಳೂರಿನಲ್ಲಿ ಟೊಮ್ಯಾಟೋ ಸಾಗಿಸುತ್ತಿದ್ದ ವಾಹನದಲ್ಲಿದ್ದ ರೈತ ಹಾಗೂ ವಾಹನ ಚಾಲಕನ ಮೇಲೆ ಹಲ್ಲೆ ಕೂಡ ನಡೆಸಿ ಲಕ್ಷಾಂತರ ರೂಪಾಯಿ ಮೌಲ್ಯದ ಸುಮಾರು 250 ಕೆಜಿ ಟೊಮ್ಯಾಟೋ ಸಹಿತ ವಾಹನವನ್ನು ದೋಚಿದ್ದು, ಈ ಕುರಿತಾಗಿ ಬೆಂಗಳೂರಿನ ಆರ್ಎಂಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಿರಿಯೂರಿನಿಂದ ಕೋಲಾರಕ್ಕೆ ರೈತರು ಬೊಲೆರೋ ವಾಹನದಲ್ಲಿ ಟೊಮ್ಯಾಟೋ ಸಾಗಿಸುತ್ತಿದ್ದು, ಇದನ್ನು ಕಂಡ ಮೂವರು ಖದೀಮರು ಟೊಮ್ಯಾಟೋ ತುಂಬಿದ್ದ ಬೊಲೆರೋ ವಾಹನವನ್ನು ಹಿಂಬಾಲಿಸಿಕೊಂಡು ಬಂದು ಬಳಿಕ ಆರ್ಎಂ.ಸಿ ಯಾರ್ಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಪೀಣ್ಯದ ಬಳಿ ವಾಹನ ಅಡ್ಡಗಟ್ಟಿ ತಮ್ಮ ವಾಹನಕ್ಕೆ ಟಚ್ ಮಾಡಿದ್ದೀರಿ ಎಂದು ಗಲಾಟೆ ಮಾಡಿದ್ದಾರೆ. ಈ ವೇಳೆ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಹಣ ಇಲ್ಲ ಎಂದು ಗೊತ್ತಾದಾಗ ಡಿಜಿಟಲ್ ಪೇಮೆಂಟ್ ಮೂಲಕ ಹಣವನ್ನು ವರ್ಗಾವಣೆ ಮಾಡಿಸಿಕೊಂಡಿದ್ದಾರೆ. ಬಳಿಕ ಬಳಿಕ ರೈತ ಹಾಗೂ ಚಾಲಕನನ್ನು ವಾಹನದಲ್ಲಿಯೇ ಕೂರಿಸಿಕೊಂಡು ಹೋಗಿ ಚಿಕ್ಕಜಾಲ ಬಳಿ ರೈತನನ್ನು ಇಳಿಸಿ ವಾಹನ ಸಮೇತ ಕಳ್ಳರು ಪರಾರಿಯಾಗಿದ್ದಾರೆ.