ಹಾಸನ, ಏ 02(SM): ಪ್ರಧಾನಿ ನರೇಂದ್ರ ಮೋದಿ ಭಾರತವನ್ನು 'ಹಿಂದೂ ರಾಷ್ಟ್ರ'ವನ್ನಾಗಿ ಮಾಡಲು ಬಯಸಿದ್ದಾರೆ ಎಂದು ಜೆಡಿಎಸ್ ವರಿಷ್ಠಾ ಹಾಗೂ ಮಾಜಿ ಪ್ರಧಾನಿ ದೇವೇಗೌಡ ಆರೋಪಿಸಿದ್ದಾರೆ. ಕಾಶ್ಮೀರಕ್ಕೆ ನೀಡಿರುವ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡುತ್ತಾ ಅವರು ಈ ವಿಚಾರ ಪ್ರಸ್ತಾಪಿಸಿದ್ದಾರೆ.
ಕಾಶ್ಮೀರಕ್ಕೆ ಸಂವಿಧಾನದ 370ನೇ ಪರಿಚ್ಛೇದದಲ್ಲಿ ನೀಡಿರುವ ವಿಶೇಷ ಸ್ಥಾನಮಾನವನ್ನು ಕೇಂದ್ರ ರದ್ದುಗೊಳಿಸಿದೆ. ಯಾವ ಕಾರಣಕ್ಕೆ ವಿಶೇಷ ಸ್ಥಾನಮಾನ ರದ್ದುಗೊಳಿಸಲಾಗಿದೆ ಎಂದು ಪ್ರಶ್ನಿಸಿರುವ ಅವರು, ಅಂದಿನ ಕಾಲದ ಮಹಾರಾಜರ ಜತೆಗೆ ಪರಿಚ್ಛೇದ 370ಕ್ಕೆ ಸಮ್ಮತಿಸಿದ ಬಳಿಕ ಕಾಶ್ಮೀರವು ಭಾರತಕ್ಕೆ ಸೇರ್ಪಡೆಗೊಂಡಿತು ಎಂದು ಎಚ್.ಡಿ. ದೇವೇಗೌಡ ಹೇಳಿದ್ದಾರೆ.
ಜಮ್ಮು-ಕಾಶ್ಮೀರದಲ್ಲಿ ಬೌದ್ಧರು, ಮುಸ್ಲಿಮರು, ಹಿಂದೂಗಳು, ಬ್ರಾಹ್ಮಣರು, ಪಂಡಿತರು ಸೇರಿದಂತೆ ಹಲವಾರು ಸಮುದಾಯದವರು ಇದ್ದಾರೆ. ಆ ವಾತಾವರಣವನ್ನು ಸರಿಯಾಗಿ ಲೆಕ್ಕಾಚಾರ ಮಾಡಿದ ನಂತರವೇ ಈ ತೀರ್ಮಾನ ಕೈಗೊಳ್ಳಲಾಗಿತ್ತು ಎಂದು ಅವರು ತಿಳಿಸಿದ್ದಾರೆ.