ಭೋಪಾಲ್, ಜು 8 (DaijiworldNews/MS): "ತನ್ನ ಮೇಲೆ ಮೂತ್ರ ವಿಸರ್ಜನೆ ಮಾಡಿದ ವ್ಯಕ್ತಿಗೆ ತಪ್ಪಿನ ಅರಿವಾಗಿದ್ದು, ಆತನನ್ನು ಜೈಲಿನಿಂದ ಬಿಡುಗಡೆ ಮಾಡಿ" ಎಂದು ಸಂತ್ರಸ್ತ ಬುಡಕಟ್ಟು ಜನಾಂಗದ ದಶ್ಮತ್ ರಾವತ್ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಮಧ್ಯ ಪ್ರದೇಶದ ಸೀಧೀ ಜಿಲ್ಲೆಯಲ್ಲಿ ಬಿಜೆಪಿಯ ನಾಯಕ ಪ್ರವೇಶ್ ಶುಕ್ಲಾ ಆದಿವಾಸಿ ವ್ಯಕ್ತಿ ಮೇಲೆ ಮೂತ್ರ ವಿಸರ್ಜನೆ ಮಾಡಿರುವುದು ದೇಶಾದ್ಯಂತ ಟೀಕೆಗೆ ಗುರಿಯಾಗಿತ್ತು. ಘಟನೆ ಬೆನ್ನಲ್ಲೇ ಆರೋಪಿಯನ್ನು ಪೊಲೀಸರು ಬುಧವಾರ ಬಂಧಿಸಿದ್ದರು. ಐಪಿಸಿ ಮತ್ತು ಎಸ್ಸಿ/ಎಸ್ಟಿ(ದೌರ್ಜನ್ಯ ತಡೆ) ಕಾಯ್ದೆಯಡಿ ಶುಕ್ಲಾ ವಿರುದ್ಧ ಕೇಸ್ ದಾಖಲಿಸಲಾಗಿತ್ತು. ಪ್ರಸ್ತುತ ಜೈಲಿನಲ್ಲಿರುವ ಆರೋಪಿ ವಿರುದ್ಧ ಕಠಿಣ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿಯೂ ಕ್ರಮ ಕೈಗೊಳ್ಳಲಾಗಿದೆ. ಸೀಧೀಯಲ್ಲಿ ಶುಕ್ಲಾಗೆ ಸೇರಿದ ಮನೆಯ ಅಕ್ರಮ ಭಾಗವನ್ನು ಧ್ವಂಸಗೊಳಿಸಲಾಗಿತ್ತು.
ದೇಶಾದ್ಯಂತ ಆಕ್ರೋಶ ವ್ಯಕ್ರವಾದ ಹಿನ್ನಲೆಯಲ್ಲಿ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಸಂತ್ರಸ್ತ ವ್ಯಕ್ತಿ ದಶ್ಮತ್ ರಾವತ್ ಅವರ ಪಾದಗಳನ್ನು ತೊಳೆದು ಕ್ಷಮೆಯಾಚಿಸಿದ್ದರು.
ಈ ಎಲ್ಲಾ ಘಟನೆಯ ಬಳಿಕ ಸಂತ್ರಸ್ತ ವ್ಯಕ್ತಿ ದಶ್ಮತ್ ರಾವತ್, "ರಾಜ್ಯ ಸರ್ಕಾರಕ್ಕೆ ನನ್ನ ಬೇಡಿಕೆ ಏನೆಂದರೆ, ಅವರಿಂದ(ಆರೋಪಿಯಿಂದ) ತಪ್ಪಾಗಿದೆ. ಈಗ ಪ್ರವೇಶ್ ಶುಕ್ಲಾ ಅವರನ್ನು ಬಿಡುಗಡೆ ಮಾಡಬೇಕು. ಈ ಹಿಂದೆ ಏನೇ ಮಾಡಿದ್ದರೂ ಈಗ ಅವರಿಗೆ ತಮ್ಮ ತಪ್ಪಿನ ಅರಿವಾಗಿದೆ" ಎಂದು ಮಾದ್ಯಮದ ಮೂಲಕ ವಿನಂತಿಸಿಕೊಂಡಿದ್ದಾರೆ.