ಬೆಂಗಳೂರು, ಜು 4 (DaijiworldNews/MS): ವರ್ಗಾವಣೆ ದಂಧೆ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹನಿಮೂನ್ ಪೀರಿಯಡ್ ಹೀಗಾದರೆ ಮುಂದಿನ ಕಥೆಯೇನು ಎಂದು ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ಸರ್ಕಾರ ಬಂದ ಮೇಲೆ ನಡೆಯುತ್ತಿರುವ ವರ್ಗಾವಣೆ ದಂಧೆ ಹಾಗೂ ಕಾಸಿಗಾಗಿ ಪೋಸ್ಟಿಂಗ್ ಬಗ್ಗೆ ದಾಖಲೆ ಕೊಡಲು ಸಿದ್ಧನಿದ್ದೇನೆ. ತನಿಖೆ ನಡೆಸುವ ದಮ್ಮು ತಾಕತ್ತು ಸರಕಾರಕ್ಕೆ ಇದೆಯಾ ಎಂದು ಇದೇ ವೇಳೆ ಕಾಂಗ್ರೆಸ್ಗೆ ಸವಾಲೆಸೆದಿದ್ದಾರೆ.
ಯಾರೋ ಒಬ್ಬರು ತಾಕತ್ತು ಇದ್ದರೆ ಕುಮಾರಸ್ವಾಮಿ ದಾಖಲೆ ಕೊಡಲಿ ಎಂದು ಹೇಳಿದ್ದಾರೆ. ಅದಕ್ಕೆ ಇದೇ ನನ್ನ ಉತ್ತರ. , ಅವರ ಕನಸು ಈಡೇರಿಸುತ್ತೇನೆ. ದಾಖಲೆ ಕೊಟ್ಟರೆ ವರ್ಗಾವಣೆ ದಂಧೆ ನಡೆದಿದೆ ಎಂದು ಆರೋಪಿಸಲಾಗಿರುವ ಮಂತ್ರಿಯನ್ನು ವಜಾ ಮಾಡ್ತಿರಾ? ಎಂದು ಪ್ರಶ್ನಿಸಿದ್ದಾರೆ.
ಸರಕಾರ ಇನ್ನೂ ಹನಿಮೂನ್ ಪೀರಿಯಡ್ನಲ್ಲಿದೆ ಎಂದು ಕಾಂಗ್ರೆಸ್ನವರೇ ಹೇಳುತ್ತಿದ್ದಾರೆ. ಸರಕಾರಕ್ಕೆ ಐದು ಆರು ತಿಂಗಳಾದರೂ ಸಮಯ ಕೊಡಬೇಡವೇ ಎಂದು ಕೆಲವರು ಕೇಳುತ್ತಿದ್ದಾರೆ. ಹನಿಮೂನ್ ಪೀರಿಯಡ್ನಲ್ಲಿದ್ದರೆ ಈಗೆಲ್ಲಾ ಮಾಡುತ್ತಾರೆಯೇ ಈಗಾದರೆ ಮುಂದಿನ ಕಥೆಯೇನು ಎಂದು ಕೇಳಿದ್ದಾರೆ.