ನವದೆಹಲಿ,ಏ 02 (MSP): ಲೋಕಸಭೆ ಚುನಾವಣೆ ಹಿನ್ನಲೆಯಲ್ಲಿ ಸ್ಪ್ಯಾಮ್ ಮತ್ತು ನಕಲಿ ಖಾತೆಗಳ ಮೇಲೆ ಹದ್ದಿನ ಕಣ್ಣಿಟ್ಟಿರುವ ಪೇಸ್ ಬುಕ್ ಈಗ ಕಾಂಗ್ರೆಸ್ ವಾಹಿನಿ ತಂತ್ರಜ್ಞಾನ ವಿಭಾಗದವರಿಗೆ ಸಂಬಂಧಿಸಿದ 687 ಫೇಸ್ ಬುಕ್ ಪೇಜ್ ಡಿಲೀಟ್ ಮಾಡಿದ ಬೆನ್ನಲೇ ಬಿಜೆಪಿ ಬೆಂಬಲಿತ 200 ಪೇಜ್ಗಳನ್ನೂ ತೆಗೆದುಹಾಕಿದೆ.
ನಕಲಿ ಖಾತೆಗಳ ವಿರುದ್ದ ಪ್ರಹಾರ ಆರಂಭಿಸಿರುವ ಫೇಸ್ ಬುಕ್ ಸಂಸ್ಥೆ, 200 ಪೇಜ್ ಗಳು ಬಿಜೆಪಿ ಬೆಂಬಲಿತ ಮತ್ತು ಹಿಂದುತ್ವವಾದಿ ವಿಚಾರಧಾರೆಗಳನ್ನು ಪ್ರಚಾರ ಮಾಡುತ್ತಿದ್ದವು .ಈ ಖಾತೆಗಳು ನಂಬಲು ಅರ್ಹವಾಗಿರಲಿಲ್ಲ. ವಿಶ್ವಾಸಾರ್ಹವಲ್ಲದ ನಡವಳಿಕೆ ಮತ್ತು ಅಂಕೆ ಮೀರಿದ ವರ್ತನೆಗಳಿಗೆ ಕಡಿವಾಣ ಹಾಕಲು ಪೇಜ್ ಗಳನ್ನು ಅಳಿಸಿ ಹಾಕಿದ್ದು, ತಾನು ಕೆಲವು ಸಂಸ್ಥೆಗಳು ನಿರ್ವಹಿಸುತ್ತಿದ್ದ ಹಲವು ರಾಜಕೀಯದ ಪೇಜ್ಗಳನ್ನು ರದ್ದು ಮಾಡಿರುವುದಾಗಿ ಹೇಳಿದೆ. ಅದರಲ್ಲಿ ಪ್ರಮುಖವಾದವು ಗುಜರಾತ್ ಮೂಲದ ಡಿಜಿಟಲ್ ಮಾರ್ಕೆಂಟಿಂಗ್ ಸಂಸ್ಥೆಯಾದ ’ಸಿಲ್ವರ್ ಟಚ್ ಟೆಕ್ನಾಲಜೀಸ್’, ಗುಜರಾತ್ ಕಾಂಗ್ರೆಸ್ನ ಐಟಿ ವಿಭಾಗ ಮತ್ತು ಪಾಕಿಸ್ತಾನದ ಸೇನಾ ಸಾರ್ವಜನಿಕ ಸಂಪರ್ಕ ಸಂಸ್ಥೆಯಾದ ಐಎಸ್ಪಿಆರ್ ನಿರ್ವಹಿಸುತ್ತಿದ್ದ ಪೇಜ್ಗಳು. ಇದರ ಜತೆಗೆ ಕೆಲ ವ್ಯಕ್ತಿಗಳು ನಿರ್ವಹಿಸುತ್ತಿದ್ದ ಪುಟಗಳನ್ನೂ ರದ್ದು ಮಾಡಿರುವುದಾಗಿ ಫೇಸ್ಬುಕ್ ಹೇಳಿದೆ.
ಅಚ್ಚರಿ ಎಂದರೆ ಸಿಲ್ವರ್ ಟಚ್ ಟೆಕ್ನಾಲಜೀಸ್ ಸಂಸ್ಥೆಯು ಮೋದಿ ಅವರ ವೈಯಕ್ತಿಕ ಆ್ಯಪ್ ಆಗಿರುವ ನಮೋ ಆ್ಯಪ್ ಅನ್ನೂ ನಿರ್ವಹಣೆ ಮಾಡುತ್ತಿದೆ. ಈ ಸಂಸ್ಥೆ ನಿರ್ವಹಣೆ ಮಾಡುತ್ತಿದ್ದ ಸುಮಾರು 15 ಗ್ರೂಪ್ ಅಥವಾ ಪೇಜ್ಗಳನ್ನು ಫೇಸ್ಬುಕ್ ಅಸ್ತಿತ್ವ ಇಲ್ಲದಂತೆ ಮಾಡಿದೆ. ಇದರಲ್ಲಿ ಪ್ರಮುಖವಾದದ್ದು “The Indian Eye” ಪೇಜ್ ಆಗಿದೆ.
ಕಾಂಗ್ರೆಸ್ ಪೇಜ್ ಗಳು ಡಿಲೀಟ್ ಆಗಿದೆ ಎಂದು ಖುಷಿ ಪಟ್ಟ ಬಿಜೆಪಿಗರು ಫೇಸ್ ಬುಕ್ ಸಂಸ್ಥೆ ಮಾಡುತ್ತಿರುವ ನಕಲಿ ಖಾತೆಗಳ ಶುದ್ದೀಕರಣ ಕ್ರಿಯೆ ಕಂಡು ಸಪ್ಪಗಾಗಿರುವುದಂತು ಸತ್ಯ.