ಕಾಸರಗೋಡು, ಎ02(SS): ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ವಯನಾಡು ಲೋಕಸಭೆ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದು, ಎ.4ರಂದು ನಾಮಪತ್ರ ಸಲ್ಲಿಸಲಿದ್ದಾರೆ. ಎ.3ರಂದು ಸಂಜೆ ಕೇರಳಕ್ಕೆ ಆಗಮಿಸಲಿರುವ ಅವರು ಎ.4ರಂದು ಬೃಹತ್ ರ್ಯಾಲಿ ಮೂಲಕ ಚುನಾವಣಾಧಿಕಾರಿಗೆ ನಾಮಪತ್ರ ಸಲ್ಲಿಸಲಿದ್ದಾರೆ.
ರಾಹುಲ್ ಸ್ಪರ್ಧಿಸುವ ವಿಚಾರ ಘೋಷಣೆಯಾಗುತ್ತಿದ್ದಂತೆಯೇ ವಯನಾಡ್ ಲೋಕಸಭೆ ಕ್ಷೇತ್ರದಲ್ಲಿ ಪ್ರಚಾರ ಕಾರ್ಯಗಳು ಭರದಿಂದ ನಡೆಯುತ್ತಿವೆ. ಪ್ರಮುಖ ಸ್ಥಳಗಳಲ್ಲಿ ಗೋಡೆ ಬರಹ, ಪೋಸ್ಟರ್ಗಳ ಮುದ್ರಣವೂ ಪೂರ್ಣಗೊಂಡಿದೆ. ಪ್ರತೀ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಬೃಹತ್ ಮೆರವಣಿಗೆಯನ್ನು ಕೂಡ ಕಾರ್ಯಕರ್ತರು ನಡೆಸಿದ್ದರು.
ಇದೀಗ ರಾಹುಲ್ ಗಾಂಧಿ ಆಗಮನದೊಂದಿಗೆ ನಾಮಪತ್ರ ಸಲ್ಲಿಸಲಿದ್ದು, ವಯನಾಡ್ನಲ್ಲಿ ಸಿದ್ಧತೆ ನಡೆಯುತ್ತಿದೆ. ರಾಹುಲ್ ಗಾಂಧಿ ವಯನಾಡ್ಗೆ ಆಗಮಿಸುವ ಹಿನ್ನೆಲೆಯಲ್ಲಿ, ಕಾಂಗ್ರೆಸ್ ನಾಯಕರು ಈಗಾಗಲೇ ಕೇರಳಕ್ಕೆ ಆಗಮಿಸಿ ನಾಮಪತ್ರ ಸಲ್ಲಿಕೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
ರಾಹುಲ್ ಗಾಂಧಿ ವಯನಾಡ್ನಲ್ಲಿ ಸ್ಪರ್ಧಿಸುವ ಹಿನ್ನೆಲೆಯಲ್ಲಿ ಭದ್ರತೆಗಾಗಿ ಈಗಾಗಲೇ ಎಸ್ಪಿಜಿ ತಂಡ ವಯನಾಡ್ಗೆ ಆಗಮಿಸಿದೆ.