ಹಾಸನ, ಎ02(SS): ಬಿಜೆಪಿಯವರು ಮಾತ್ರ ಹಿಂದೂಗಳು ಎಂದು ಬಿಂಬಿಸಿಕೊಳ್ಳುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಪ್ರಶ್ನಿಸಿದ್ದಾರೆ.
ಚನ್ನರಾಯಪಟ್ಟಣ ತಾಲೂಕಿನ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಇಡೀ ರಾಷ್ಟ್ರವನ್ನು ಹಿಂದೂ ರಾಷ್ಟ್ರವನ್ನಾಗಿ ಪರಿವರ್ತಿಸಬೇಕು ಎಂಬುದು ಮೋದಿ ಅವರ ಕಲ್ಪನೆಯಾಗಿದೆ. ಬಿಜೆಪಿಯವರು ಮಾತ್ರ ಹಿಂದೂಗಳು ಎಂದು ಬಿಂಬಿಸಿಕೊಳ್ಳುತ್ತಿರುವುದು ಎಷ್ಟರ ಮಟ್ಟಿಗೆ ಸರಿ..? 2019 ರ ಲೋಕಸಭಾ ಚುನಾವಣೆಯಲ್ಲಿ ಹಿಂದೂ ರಾಷ್ಟ್ರ ನಿರ್ಮಾಣದ ಪರೀಕ್ಷೆಯಾಗಲಿ ಎಂದು ಸವಾಲು ಹಾಕಿದ್ದಾರೆ.
ಮೈತ್ರಿ ಸರ್ಕಾರದ ಎಲ್ಲಾ ಅಭ್ಯರ್ಥಿಗಳು ಚುನಾವಣೆಯಲ್ಲಿ ಹೆಚ್ಚೆಚ್ಚು ಸ್ಥಾನದಲ್ಲಿ ಗೆಲುವು ಸಾಧಿಸುವ ಮೂಲಕ ಬಿಜೆಪಿ ಅಭ್ಯರ್ಥಿಗಳನ್ನು ಸೋಲಿಸುವುದೇ ತಮ್ಮ ಗುರಿ. ಹೀಗಾಗಿ ಮೈತ್ರಿ ಅಭ್ಯರ್ಥಿಗಳ ಗೆಲುವಿಗಾಗಿ ಪ್ರಚಾರ ನಡೆಸುತ್ತಿದ್ದೇನೆ ಎಂದು ತಿಳಿಸಿದ್ದಾರೆ.
ನಾನು ಕೂಡ ಸಹ ಹಿಂದೂ. ಮುಸ್ಲಿಂ, ಕ್ರಿಶ್ಚಿಯನ್ ಅಲ್ಲ. ಹಿಂದೂ ಆಗಿರುವ ನಾನು ಎಂದಿಗೂ ಏಕ ಧರ್ಮದ ಪರ ಮಾತನಾಡದೇ ಎಲ್ಲಾ ಧರ್ಮವನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ ಕೆಲಸ ಮಾಡಿದ್ದೇನೆ. ದೇಶದಲ್ಲಿ ಎಲ್ಲಾ ಧರ್ಮೀಯರು ಅನೋನ್ಯವಾಗಿ ಬಾಳಲು ಸಾಧ್ಯವಾಗುವಂತಹ ಏಕ ರೂಪದ ವ್ಯವಸ್ಥೆಯನ್ನು ಜಾರಿಗೆ ತರಬೇಕು ಎಂದು ತಿಳಿಸಿದ್ದಾರೆ.
ದೇಶಕ್ಕಾಗಿ ಬಿಜೆಪಿ ಯಾವತ್ತೂ ಹೋರಾಟ ಮಾಡಿಲ್ಲ. ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟವರು ಮಹಾತ್ಮ ಗಾಂಧೀಜಿ. ನೌಕಾಲಿಯಲ್ಲಿ ನಡೆದ ಕೋಮುಗಲಭೆ ಸಂದರ್ಭದಲ್ಲಿ ಮುಸ್ಲಿಮರ ಹತ್ಯೆಯಾದಾಗಲೂ ಸಹ ಗಾಂಧೀಜಿಯವರು ಮುಸ್ಲಿಮರ ಪರ ಹೋರಾಟ ಮಾಡಿದ್ದಾರೆ. ದೇಶದಲ್ಲಿ ಅಂಬೇಡ್ಕರ್ ಅವರು ಬರೆದುಕೊಟ್ಟ ಸಂವಿಧಾನ ಇದೆ. ಈ ಸಂವಿಧಾನವನ್ನು ದೇಶದ 130 ಕೋಟಿ ಜನರೂ ಸಹ ಒಪ್ಪುತ್ತಾರೆ. ಆದರೆ ಬಿಜೆಪಿ ನಾಯಕರು ಸಂವಿಧಾನವನ್ನೇ ಬದಲಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ.