ಕೊಪ್ಪಳ,ಏ 02 (MSP): ಬಿಜೆಪಿ ಮೇಲೆ ಮುಸ್ಲಿಮರಿಗೆ ನಂಬಿಕೆ ಇಲ್ಲ. ಇದೇ ಕಾರಣಕ್ಕೆ ಕರ್ನಾಟಕದಲ್ಲಿ ಮುಸ್ಲಿಮರಿಗೆ ನಾವು ಟಿಕೆಟ್ ಕೊಡಲ್ಲ ಎಂದು ಬಿಜೆಪಿ ಮುಖಂಡ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.
ಅವರು ಕೊಪ್ಪಳದಲ್ಲಿ ನಡೆದ ಕುರುಬ ಮತ್ತು ಅಲ್ಪಸಂಖ್ಯಾತ ಸಮುದಾಯದ ಸದಸ್ಯರ ಸಭೆಯಲ್ಲಿ ಈ ಮಾತುಗಳನ್ನು ಆಡಿದ್ದಾರೆ. ಕಾಂಗ್ರೆಸ್ ಪಕ್ಷವು ಅಲ್ಪಸಂಖ್ಯಾತ ಸಮುದಾಯವನ್ನು ಮತ ಬ್ಯಾಂಕ್ ಆಗಿ ಮಾತ್ರ ಬಳಸುತ್ತದೆ ಬಿಟ್ಟರೆ ಸಮುದಾಯಕ್ಕಾಗಿ ಏನೂ ಮಾಡಿಲ್ಲ ಎಂದರು. ಬಿಜೆಪಿ ಪಕ್ಷದ ಮೇಲೆ ಮೊದಲು ನಂಬಿಕೆ ಬೆಳೆಸಿಕೊಳ್ಳಿ. ನಾವು ನಿಮಗೂ ಟಿಕೆಟ್ ನೀಡುತ್ತೇವೆ. ಆದರೆ ನಿಮಗೆ ನಮ್ಮ ಮೇಲೆ ನಂಬಿಕೆಯೇ ಇಲ್ಲವಾದರೆ ಟಿಕೆಟ್ ನೀಡುವುದು ಹೇಗೆ? ನಮ್ಮನ್ನು ಮೇಲೆ ನಂಬಿಕೆ ಬೆಳೆಸಿಕೊಂಡರೆ ಹಲವು ಅಭಿವೃದ್ದಿ ಕಾರ್ಯಗಳನ್ನೂ ಮಾಡಿಕೊಡುತ್ತೇವೆ ಎಂದಿದ್ದಾರೆ.
ಈಶ್ವರಪ್ಪ ಅವರು ವಿವಾದಾತ್ಮಕ ಹೇಳಿಕೆ ನೀಡುವುದು ಇದು ಪ್ರಥಮವಲ್ಲ. 2018 ರ ಜನವರಿಯಲ್ಲಿ ಈ ರೀತಿಯ ಹೇಳಿಕೆ ನೀಡಿ ಈಶ್ವರಪ್ಪ ವಿವಾದ ಸೃಷ್ಟಿಸಿದ್ದರು. ಕಾಂಗ್ರೆಸ್ ಪಕ್ಷದಲ್ಲಿರುವ ಮುಸ್ಲಿಮರೆಲ್ಲರೂ ಕೊಲೆಗಡುಕರು ಬಿಜೆಪಿ ಜತೆ ಇರುವವರೆಲ್ಲರೂ ಉತ್ತಮ ಮುಸ್ಲಿಮರು. ಆರ್ಎಸ್ಎಸ್ ಮತ್ತು ಬಿಜೆಪಿಯ 22 ಕಾರ್ಯಕರ್ತರನ್ನು ಕೊಲೆಮಾಡಿದವರು ಕಾಂಗ್ರೆಸ್ ಪಕ್ಷದಲ್ಲಿದ್ದಾರೆ ಎಂದರು.