ಬೆಂಗಳೂರು, ಜೂ 30 (DaijiworldNews/HR): ಜುಲೈ.1ರಿಂದ ಕರ್ನಾಟಕದಲ್ಲಿ ಅನ್ನಭಾಗ್ಯ ಯೋಜನೆಯಡಿ 5 ಕೆಜಿ ಅಕ್ಕಿ ಜೊತೆ ಉಳಿದ 5 ಕೆಜಿ ಅಕ್ಕಿ ಬದಲಿಗೆ ಹಣ ನೀಡುತ್ತೇವೆ ಎಂದು ಆಹಾರ ಇಲಾಖೆ ಸಚಿವ ಕೆ.ಹೆಚ್.ಮುನಿಯಪ್ಪ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 5 ಕೆಜಿ ಅಕ್ಕಿ ಜೊತೆ ಉಳಿದ 5 ಕೆಜಿ ಅಕ್ಕಿ ಬದಲಿಗೆ 170 (ಪ್ರತಿ ಕೆ.ಜಿಗೆ 34) ನೀಡುತ್ತೇವೆ. 90 ಪರ್ಸೆಂಟ್ ಅಕೌಂಟ್ ಇದ್ದಾವೆ. ಅಕೌಂಟ್ ಇಲ್ಲದವರು ಮಾಡಿಸಬೇಕು. ಒಬ್ಬರಿಗೆ 170 ರೂಪಾಯಿ ಕೊಡುತ್ತೇವೆ. ಅಕ್ಕಿ ಸಿಗುವರೆಗೆ ಮಾತ್ರ ಈ ಹಣ ನೀಡುತ್ತೇವೆ ಎಂದರು.
ಇನು ಹೆಚ್ಚುವರಿ 5 ಕೆಜಿ ಅಕ್ಕಿ ಸಿಗುವವರೆಗೂ ಖಾತೆಗೆ ಹಣ ಜಮೆ ಮಾಡುತ್ತೇವೆ. ಎರಡು ಕೆಜಿ, ಜೋಳ/ರಾಗಿ ಕೊಡುತ್ತೇವೆ. ಎಂಟು ಕೆಜಿ ಅಕ್ಕಿ ಕೊಡುತ್ತೇವೆ. ಅಕ್ಕಿ ಕೊಡಲು ನಾವು ಸಿದ್ದವಾಗಿದ್ದೇವೆ ಆದ್ರೆ ಕೇಂದ್ರ ಅಕ್ಕಿ ಕೊಟ್ಟಿಲ್ಲ. ಅಕ್ಕಿ ಸಿಕ್ಕ ಬಳಿಕ ಅಕ್ಕಿ ಕೊಡುತ್ತೇವೆ ಎಂದಿದ್ದಾರೆ.
ಕೇಂದ್ರ ಸರ್ಕಾರ ಮನಸ್ಸು ಬದಲಾಯಿಸಿ ಅಕ್ಕಿ ಕೊಟ್ರೆ ನಾವು ಅಕ್ಕಿ ಹಂಚಿಕೆ ಮಾಡುತ್ತೇವೆ. ಆದರೆ ಸದ್ಯಕ್ಕೆ ಫಲಾನುಭವಿಗಳ ಖಾತೆಗೆ ನೇರವಾಗಿ ಹಣ ಜಮಾ ಮಾಡಲು ಸರ್ಕಾರ ವ್ಯವಸ್ಥೆ ಮಾಡಿದೆ ಎಂದು ತಿಳಿಸಿದ್ದಾರೆ.