ಬೆಂಗಳೂರು, ಜೂ 30(DaijiworldNews/MS): ಆದಾಯ ಮೀರಿ ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಬಂಧಿತರಾಗಿರುವ ಕೆಆರ್ ಪುರ ತಹಸೀಲ್ದಾರ್ ಅಜಿತ್ ಕುಮಾರ್ ರೈ ಸಹೋದರ ಸೇರಿ ನಾಲ್ವರಿಗೆ ವಿಚಾರಣೆ ಹಾಜರಾಗುವಂತೆ ಲೋಕಾಯುಕ್ತ ನೋಟಿಸ್ ನೀಡಿದೆ.
ಇಂದು ಮುಂಜಾನೆ 11 ಗಂಟೆಗೆ ವಿಚಾರಣೆಗೆ ಹಾಜರಾಗಲು ಅಜಿತ್ ರೈ ಸಹೋದರರಾದ ಆಶಿಕ್ ರೈ, ಸ್ನೇಹಿತರಾದ ಗೌರವ ,ಹರ್ಷವರ್ಧನ್ ಸೇರಿದಂತೆ ನಾಲ್ವರಿಗೂ ಲೋಕಾಯುಕ್ತ ನೋಟಿಸ್ ನೀಡಿದೆ.
ಅಜಿತ್ ರೈಗೆ ಸಂಬಂಧಿಸಿದ ಸ್ಥಳಗಳಲ್ಲಿ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು 40 ಲಕ್ಷ ನಗದು, 700 ಗ್ರಾಂ ಚಿನ್ನ, 1.90 ಕೋಟಿ ಮೌಲ್ಯದ ವಸ್ತುಗಳು, ಐಷಾರಾಮಿ ಕಾರು ಮತ್ತು ಬೈಕ್ಗಳನ್ನು ವಶಕ್ಕೆ ಪಡೆದಿದ್ದರು. 4 ಥಾರ್ ಕಾರ್, 4 ಫಾರ್ಚೂನರ್ ಕಾರ್, 3 ರಾಯಲ್ ಎನ್ಫೀಲ್ಡ್, 1 ಲ್ಯಾಂಡ್ ಕ್ರೂಸರ್ (2.5 ಕೋಟಿ ಮೌಲ್ಯ) ಹೊಂದಿದ್ದು, ಎಲ್ಲ ಕಾರಿಗೂ ಒಂದೇ ನಂಬರ್ ರಿಜಿಸ್ಟರ್ ಇದೆ. ಆದರೆ ಇದ್ಯಾವುದಕ್ಕೂ ಅಜಿತ್ ರೈ ಲೆಕ್ಕ ಕೊಡುತ್ತಿಲ್ಲ ಎನ್ನಲಾಗಿದೆ.
ದಾಳಿ ವೇಳೆ ಅಜಿತ್ ರೈಗೆ ಸೇರಿದ 100 ಎಕರೆಗೂ ಅಧಿಕ ವಿವಿಧ ಆಸ್ತಿ ಪತ್ರಗಳು ಲಭ್ಯವಾಗಿವೆ. ಅಜಿತ್ ರೈ ಸಂಬಂಧಿಕರು, ಸ್ನೇಹಿತರ ಹೆಸರಲ್ಲೂ ಆಸ್ತಿ ಪತ್ರಗಳು ಪತ್ತೆಯಾಗಿವೆ. ಬೇನಾಮಿ ಹೆಸರಿನಲ್ಲಿ ಅಜಿತ್ ರೈ ಆಸ್ತಿ ಮಾಡಿರುವ ಶಂಕೆ ವ್ಯಕ್ತವಾಗಿದೆ.
ತಹಸೀಲ್ದಾರ್ ಅಜಿತ್ ಕುಮಾರ್ ರೈ ನಿನ್ನೆ ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.