ನವದೆಹಲಿ, ಜೂ 29 (DaijiworldNews/SM): ಕರ್ನಾಟಕ ಕಾಂಗ್ರೆಸ್ ಸರ್ಕಾರಕ್ಕೆ ಅನ್ನಭಾಗ್ಯ ಯೋಜನೆಯಡಿ ವಿತರಣೆ ಮಾಡಲು ಅಕ್ಕಿ ಸಿಗದ ಹಿನ್ನೆಲೆಯಲ್ಲಿ ಹಣ ನೀಡಲು ಮುಂದಾಗಿದ್ದು, ಇದಕ್ಕೆ ಬಿಜೆಪಿ ನಾಯಕರು ಟೀಕಿಸುತ್ತಿದ್ದಾರೆ. ಬಿಜೆಪಿಗರ ಟೀಕೆಗೆ ಡಿಕೆಶಿ ಕೌಂಟರ್ ನೀಡಿದ್ದಾರೆ.
ದೆಹಲಿಯಲ್ಲಿ ಮಾತನಾಡಿದ ಅವರು, ಅಕ್ಕಿ ಸಿಗದಿದ್ರೆ ಹಣ ನೀಡುವಂತೆ ಬಿಜೆಪಿಯವರೇ ಸಲಹೆ ನೀಡಿದ್ದರು. ತಾತ್ಕಾಲಿಕವಾಗಿ ಅಕ್ಕಿ ಬದಲು ನಾವು ಜನರಿಗೆ ಹಣ ನೀಡುತ್ತಿದ್ದೇವೆ. ನಮ್ಮ ರಾಜ್ಯದಲ್ಲೇ ಅಕ್ಕಿ ಸಂಗ್ರಹ ಮಾಡಲು ಚಿಂತನೆ ಇದೆ ಎಂದು ಹೇಳಿದರು.
5 ಕೆ.ಜಿ. ಸೇರಿ 10 ಕೆಜಿ ಅಕ್ಕಿ ಕೊಡುವುದಾಗಿ ಮಾತು ಕೊಟ್ಟಿದ್ದೆವು. ಕೊಟ್ಟ ಮಾತು ಉಳಿಸಿಕೊಳ್ಳಲು ಜನರ ಖಾತೆಗೆ ಹಣ ವರ್ಗಾವಣೆ ಮಾಡಲು ಮುಂದಾಗಿದ್ದೇವೆ ಎಂದು ಡಿಕೆ ಶಿವಕುಮಾರ್ ತಿಳಿಸಿದರು.
ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೆಖಾವತ್ ಅವರನ್ನು ಭೇಟಿ ಮಾಡಲು ದೆಹಲಿಗೆ ಬಂದಿದ್ದೇನೆ. ರಾಜ್ಯದ ಹಲವು ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಲು ಬಂದಿದ್ದೇನೆ. ಈಗ ಅವರನ್ನು ಭೇಟಿ ಮಾಡುತ್ತೇನೆ. ಸಚಿವರ ಜತೆ ಏನೆಲ್ಲಾ ಚರ್ಚೆ ಮಾಡಿದ್ದೇನೆಂದು ನಾಳೆ (ಶುಕ್ರವಾರ) ಬೆಳಗ್ಗೆ ತಿಳಿಸುತ್ತೇನೆ ಎಂದು ಅವರು ಹೇಳಿದರು. ಬಳಿಕ ಗಜೇಂದ್ರ ಸಿಂಗ್ ಭೇಟಿಗೆ ತೆರಳಿದರು.