ನವದೆಹಲಿ,ಏ 02 (MSP): ಕರಾವಳಿ ಪ್ರದೇಶಗಳಲ್ಲಂತೂ ಮನೆ ಮನೆಯಲ್ಲೂ ಕಾಣಸಿಗುವ ಹಲಸಿನ ಹಣ್ಣು, ಕೇರಳದ ’ರಾಜ್ಯ ಹಣ್ಣು ’, ಮಾರ್ಚ್-ಎಪ್ರಿಲ್ ತಿಂಗಳು ಬಂತೆಂದರೆ ಸಾಕು ಎಲ್ಲೆಲ್ಲೂ ಘಮ ಹರಡುವ ಹಣ್ಣು ಮಾತ್ರ ವಿದೇಶಿಯರಿಗೆ ಕುರೂಪಿಯಂತೆ ಕಂಡಿದೆ.
ಕರಾವಳಿಗರ, ಕೇರಳಿಗರ ನೆಚ್ಚಿನ ಹಲಸಿನ ಹಣ್ಣನ್ನು ಜರೆದಿದ್ದು, ಬ್ರಿಟನ್ನ 'ಗಾರ್ಡಿಯನ್' ಪತ್ರಿಕೆ ಕುರೂಪಿ ಹಣ್ಣು ಹಲಸು ಎಂದು ಅವಮಾನಮಾಡಿದೆ. ’ಭಾರತದಲ್ಲಿ ಜನರಿಗೆ ತಿನ್ನಲು ಏನೂ ಇಲ್ಲದಿದ್ದಾಗ ಇದನ್ನು ಸೇವಿಸುತ್ತಾರೆ. ಕುರೂಪಿ, ವಾಸನೆಯ, ಕೀಟಗಳನ್ನು ಸೆಳೆಯುವ ಹಣ್ಣು, ಮುಳ್ಳುಗಳಿರುವ ಈ ಅಸಹ್ಯಕರ ಹಣ್ಣಿನಲ್ಲಿ ಯಾವ ರುಚಿಯೂ ಇಲ್ಲ, ಈ ಹಣ್ಣು ನೋಡಿದ್ರೆ ರಾಕ್ಷಸ ಆಕೃತಿಯನ್ನು ನೋಡಿದಂತಾಗುತ್ತದೆ ಎಂದು ಲೇಖನದಲ್ಲಿ ವಿವರಿಸಲಾಗಿದೆ. ಇದನ್ನು ಬರೆದಿದ್ದು ಜೋಯ್ ವಿಲಿಯಮ್ಸ್ ಎನ್ನುವ ವಿದೇಶಿ ಲೇಖಕಿ. ’ಸಸ್ಯಾಹಾರಿಗಳ ಆಕರ್ಷಣೆ ಹಲಸಿನ ಹಣ್ಣು: ಅದನ್ನು ಮನೆಯಲ್ಲಿ ರುಚಿಕರ ಖಾದ್ಯವಾಗಿ ಬಳಸಬಹುದೇ?' ಎಂಬರ್ಥದ ಶೀರ್ಷಿಕೆಯಲ್ಲಿ ಲೇಖನ ಬರೆದಿದ್ದರು.
ಒಂದು ಕಾಲದಲ್ಲಿ ಯಾರೂ ತಿನ್ನದೆ ಮರಗಳಲ್ಲಿ ಕೊಳೆದು ಹೋಗುತ್ತಿದ್ದ ಕುರೂಪಿ ಹಣ್ಣನ್ನು 2017ರ ಬಳಿಕ ಜನಪ್ರಿಯಗೊಳಿಸಲಾಗುತ್ತಿದೆ. ಇದನ್ನು ಮಾಂಸಕ್ಕೆ ಸರಿ ಸಮಾನ ಎಂದು ಪ್ರಚಾರ ಮಾಡಲಾಗುತ್ತಿದೆ. ಇದರಲ್ಲಿರುವ ಹಲಸಿನ ಸೋಳೆಯು ಚೆಲ್ಲಾಪಿಲ್ಲಿಯಾಗಿ ಎಸೆದ ಮೊಟ್ಟೆ ಎಂದು ವ್ಯಂಗ್ಯವಾಡಿದ್ದಾರೆ.
ಈ ಅವಹೇಳನಕ್ಕೆ ಜಗತ್ತು ಸಿಡಿದೆದ್ದಿದ್ದು, ನೆಟ್ಟಿಗರು ಈ ಲೇಖನ ಬರೆದ ಲೇಖಕಿಗೆ ಟ್ವಿಟರ್ನಲ್ಲಿ ಫುಲ್ ಕ್ಲಾಸ್ ತೆಗೆದುಕೊಂಡಿದ್ದು, ಹಣ್ಣಿನ ಹೆಸರಿನಲ್ಲಿ ನಡೆಯುತ್ತಿರುವ ಜನಾಂಗೀಯ ದಾಳಿ ಎಂದಿದ್ದಾರೆ. ಮಾತ್ರವಲ್ಲದೆ ಕೇರಳದ ಶೆಫ್ ಗಳು ತಾವು ತಯಾರಿಸಿದ ತಿಂಡಿ ತಿನಿಸುಗಳ ವಿವರಗಳನ್ನು ಪ್ರಕಟಿಸಿದ್ದು, ಇದಲ್ಲದೆ ಹಲಸು ನಾನಾ ತಿನಿಸಿಗಳ ರೂಪದಲ್ಲಿ , ಚಿಫ್ಸ್, ಜಾಮ್ ಮತ್ತು ಐಸ್ಕ್ರೀಂ ನಲ್ಲೂ ಬಳಕೆಯಾಗುತ್ತಿದೆ. ಟಿನ್ಗಳಲ್ಲಿ ಹಲಸಿನ ಸೋಳೆಗಳನ್ನು ಮಾರಾಟ ಮಾಡುವ ಉದ್ಯಮ ಬೆಳೆದಿದೆ.
ಲೇಖಕರು ಇನ್ನಷ್ಟು ಹೆಚ್ಚು ಸಂಶೋಧನೆ ಮಾಡಿ ಈ ಬಗ್ಗೆ ಬರೆಯಬೇಕು ಎಂದು ಲೇಖಕಿಗೆ ಮಂಗಳಾರತಿ ಮಾಡಿದ್ದಾರೆ.