ಹಾಸನ, ಜೂ 27 (DaijiworldNews/SM): ಮೆಡಿಕಲ್ ಕಾಲೇಜುಗಳ ನಿರ್ಮಾಣದ ಅಕ್ರಮ ಸೇರಿದಂತೆ ಹಿಂದಿನ ಬಿಜೆಪಿ ಆಡಳಿತದಲ್ಲಿ ನಡೆದಿದೆ ಎನ್ನಲಾದ ಎಲ್ಲಾ ಹಗರಣಗಳ ತನಿಖೆಗೆ ಈ ಹಿಂದೆ ಹೇಳಿದ್ದಂತೆ ತನಿಖೆಗೆ ಸರಕಾರ ಮುಂದಾಗಿದೆ. ಹಗರಣ ಹಾಗೂ ಅಕ್ರಮಗಳ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ಹೇಳಿದ್ದಾರೆ.
ಚುನಾವಣಾ ಪೂರ್ವ ಎಲ್ಲಾ ಭರವಸೆಗಳನ್ನು ಸರ್ಕಾರ ಈಡೇರಿಸಲಿದೆ ಎಂದು ಹೇಳಿದ ಅವರು, ಕಾಂಗ್ರೆಸ್ನ ಐದು ಖಾತರಿಗಳ ಅನುಷ್ಠಾನದಿಂದ ಬೊಕ್ಕಸಕ್ಕೆ ವರ್ಷಕ್ಕೆ 59,000 ಕೋಟಿ ರೂಪಾಯಿ ವೆಚ್ಚವಾಗಲಿದ್ದು, ಈ ವರ್ಷ ಆಡಳಿತದ ಮೇಲೆ ಸ್ವಲ್ಪ ಹೆಚ್ಚಿನ ಹೊರೆಯಾಗಿದೆ ಎಂದು ಹೇಳಿದರು.
'ನಾವು ಹಗರಣಗಳ ಬಗ್ಗೆ ವಿಚಾರಣೆ ನಡೆಸುತ್ತೇವೆ. ನಾಲ್ಕು ಮೆಡಿಕಲ್ ಕಾಲೇಜುಗಳನ್ನು ನಿರ್ಮಿಸಲಾಗಿದ್ದು, ಅದರಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪವಿದ್ದು, ತನಿಖೆ ನಡೆಸುತ್ತೇವೆ. ಅಲ್ಲದೆ, ಶೇ 40ರಷ್ಟು ಕಮಿಷನ್ ಕುರಿತಾಗಿಯೂ ತನಿಖೆ ನಡೆಸುತ್ತೇವೆ. ಕೋವಿಡ್-19 ಅವಧಿಯಲ್ಲಿ ಆರೋಗ್ಯ ಪರಿಕರಗಳ ಖರೀದಿಗಳಲ್ಲಿ ಅಕ್ರಮಗಳು, ನೀರಾವರಿ ಯೋಜನೆಗಳಿಗೆ ಸಂಬಂಧಿಸಿದ ಅಕ್ರಮಗಳು ಮತ್ತು ಬಿಟ್ಕಾಯಿನ್ ಹಗರಣಗಳು ನಡೆದಿವೆ. ಅವುಗಳೆಲ್ಲವನ್ನೂ ತನಿಖೆ ನಡೆಸಲಾಗುವುದು' ಎಂದು ಹೇಳಿದರು.
ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಐಡಿಯಿಂದ ಪೊಲೀಸ್ ಸಬ್ಇನ್ಸ್ಪೆಕ್ಟರ್ (ಪಿಎಸ್ಐ) ನೇಮಕಾತಿ ಹಗರಣದ ತನಿಖೆ ನಡೆಯುತ್ತಿದೆ. ಅದನ್ನು ಇನ್ನಷ್ಟು ತೀವ್ರಗೊಳಿಸಲಾಗುವುದು ಮತ್ತು ತಪ್ಪಿತಸ್ಥರನ್ನು ಶಿಕ್ಷಿಸಲಾಗುವುದು ಎಂದರು.