ಹುಬ್ಬಳ್ಳಿ, ಜೂ 26 (DaijiworldNews/HR): ಕರ್ನಾಟಕದ ಕಾಂಗ್ರೆಸ್ ಸರಕಾರವು ಬಡ ಕುಟುಂಬದ ಪ್ರತಿಯೊಬ್ಬರಿಗೆ 10 ಕೆಜಿ ಅಕ್ಕಿ ನೀಡುವುದಾಗಿ ಹೇಳಿದ್ದು, ಕೇಂದ್ರ ಸರ್ಕಾರ ನೀಡುವ 5 ಕೆಜಿ ಅಕ್ಕಿಬಿಟ್ಟು ಹತ್ತು ಕೆ.ಜಿ ಅಥವಾ ಕೇಂದ್ರದ್ದು ಸೇರಿ ನೀಡುತ್ತಾರೋ ಎಂಬುದರ ಬಗ್ಗೆ ಕಾಂಗ್ರೆಸ್ ಸ್ಪಷ್ಟನೆ ನೀಡಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆಗ್ರಹಿಸಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರಕಾರ ರಾಜ್ಯ ಸರಕಾರಕ್ಕೆ ಬಡ ಕುಟುಂಬಗಳ ಪ್ರತಿಯೊಬ್ಬರಿಗೆ 5 ಕೆಜಿ ಯಷ್ಟು ಅಕ್ಕಿ ನೀಡುತ್ತಿದ್ದು, ಅದನ್ನು ಕಾಂಗ್ರೆಸ್ ಸರಕಾರ ಎಲ್ಲಿಯೂ ಹೇಳಿಕೊಳ್ಳುತ್ತಿಲ್ಲ ಇಡೀ ಯೋಜನೆ ತನ್ನದೇ ಎಂಬಂತೆ ಬಿಂಬಿಸುತ್ತಿದೆ ಎಂದರು.
ಇನ್ನು ಕೇಂದ್ರ ಸರಕಾರ ಅಕ್ಕಿ ನೀಡುತ್ತಿಲ್ಲ ಎಂದು ಜನರಲ್ಲಿ ತಪ್ಪು ಭಾವನೆ ಮೂಡಿಸುವ ಯತ್ನಕ್ಕೆ ಕಾಂಗ್ರೆಸ್ ಮುಂದಾಗಿದೆ ಎಂದು ಸಚಿವರು ಅರೋಪಿಸಿದ್ದಾರೆ.
ರಾಜ್ಯದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ವಿಧಾನಸಭೆ ವಿಪಕ್ಷ ನಾಯಕನ ಆಯ್ಕೆ ವಿಚಾರವಾಗಿ ಆರೋಪಿಸುವ ಕಾಂಗ್ರೆಸ್ ನವರಿಗೆ ತಮ್ಮ ಪಕ್ಷಕ್ಕೆ ಸುಮಾರು ಎರಡುವರೆ ವರ್ಷಗಳವರೆಗೆ ರಾಷ್ಟ್ರೀಯ ಅಧ್ಯಕ್ಷರೇ ಇರಲಿಲ್ಲ ಎಂಬ ನೆನಪು ಆಗುತ್ತಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.