ಹೊಸದೆಹಲಿ,ಏ01(AZM):ಲೋಕಸಭಾ ಚುನಾವಣೆಯಲ್ಲಿ ಭಾರತೀಯ ಮತದಾರರು ವೈವಿಧ್ಯಮಯ ಮತ್ತು ಸಮಾನ ಭಾರತಕ್ಕೆ ಮತ ಹಾಕಿ, ದ್ವೇಷ ರಾಜಕಾರಣವನ್ನು ತೊಲಗಿಸಿ ಎಂದು 200ಕ್ಕೂ ಅಧಿಕ ಭಾರತೀಯ ಸಾಹಿತಿಗಳು ಇಂದು ಮತದಾರರಿಗೆ ಮನವಿ ಮಾಡಿದ್ದಾರೆ.
ಸಾಹಿತಿಗಳು ಹಿಂದಿ,ಕನ್ನಡ,ಇಂಗೀಷ್,ಮರಾಠಿ, ಗುಜರಾತಿ, ಉರ್ದು, ಬಾಂಗ್ಲಾ, ಮಲಯಾಳಂ, ತಮಿಳು,ಮತ್ತು ತೆಲುಗು ಭಾಷೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ. "ನಮ್ಮ ಸಂವಿಧಾನ ಎಲ್ಲ ನಾಗರಿಕರಿಗೆ ಸಮಾನ ಹಕ್ಕುಗಳು, ತಮ್ಮ ಆಯ್ಕೆಯಂತೆ ತಿನ್ನುವ, ಪ್ರಾರ್ಥಿಸುವ ಮತ್ತು ಬದುಕುವ ಸ್ವಾತಂತ್ರ್ಯ, ಅಭಿವ್ಯಕ್ತಿ ಸ್ವಾತಂತ್ರ ಮತ್ತು ಅಸಮ್ಮತಿ ಸೂಚಿಸುವ ಸ್ವಾತಂತ್ರ್ಯ ನೀಡಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ನಾಗರಿಕರನ್ನು ಸಮುದಾಯ, ಜಾತಿ, ಲಿಂಗ ಅಥವಾ ಪ್ರದೇಶದ ಹಿನ್ನೆಲೆಯಲ್ಲಿ ಗುಂಪು ಹಲ್ಲೆ ನಡೆಸುವ ಅಥವಾ ಹಲ್ಲೆ ಮಾಡುವ ಅಥವಾ ತಾರತಮ್ಯ ತೋರುವ ಘಟನೆಗಳು ನಡೆಯುತ್ತಿವೆ" ಎಂದು 210 ಸಹಿಗಳುಳ್ಳ ಪತ್ರದಲ್ಲಿ ಸಾಹಿತಿಗಳು ತಿಳಿಸಿದ್ದಾರೆ.
ಭಾರತವನ್ನು ವಿಭಜಿಸಲು ದ್ವೇಷ ರಾಜಕಾರಣವನ್ನು ಬಳಸಲಾಗುತ್ತಿದೆ. ಸಾಹಿತಿಗಳು, ಕಲಾವಿದರು, ಚಿತ್ರ ತಯಾರಕರು, ಸಂಗೀತಗಾರರು ಮತ್ತು ಇತರರನ್ನು ಬೆದರಿಸುವ ಮತ್ತು ನಿಯಂತ್ರಿಸುವ ಘಟನೆಗಳು ಹೆಚ್ಚಾಗಿವೆ ಮತ್ತು ಅಧಿಕಾರದಲ್ಲಿರುವವರನ್ನು ಪ್ರಶ್ನಿಸಿದರೆ ಸುಳ್ಳು ಆರೋಪಗಳನ್ನು ಹಾಕಿ ಬಂಧಿಸುವ ಮತ್ತು ಕಿರುಕುಳ ನೀಡುವ ಅಪಾಯಕ್ಕೆ ಒಳಗಾಗಬೇಕಾಗುತ್ತದೆ ಎಂದು ಸಾಹಿತಿಗಳು ಆರೋಪಿಸಿದ್ದಾರೆ.
ಗಿರೀಶ್ ಕಾರ್ನಾಡ್, ಅರುಂಧತಿ ರಾಯ್, ಅಮಿತಾವ್ ಘೋಶ್, ಬಾಮಾ, ನಯನತಾರಾ ಸೆಹಗಲ್, ಟಿ.ಎಂ ಕೃಷ್ಣ, ವಿವೇಕ್ ಶಾನ್ಭಾಗ್, ಜೀತ್ ತಯಿಲ್, ಕೆ. ಸತೀಶ್ಚಂದ್ರನ್ ಮತ್ತು ರೋಮಿಲಾ ಥಾಪರ್ ಮುಂತಾದ ಸಾಹಿತಿಗಳು ಸೇರಿಂದತೆ ೨೦೦ಕ್ಕೂ ಅಧಿಕ ಸಾಹಿತಿಗಳು ಮತದಾರರಲ್ಲಿ ಮನವಿ ಮಾಡಿದ್ದಾರೆ.