ಬೆಂಗಳೂರು,ಏ01(AZM):ಖಾಸಗಿ ಬಸ್ ನವರು ಚುನಾವಣಾ ಸಂದರ್ಭದಲ್ಲಿ ಮತದಾರರನ್ನು ಉಚಿತವಾಗಿ ಕರೆದೊಯ್ದರೆ ಅಂತಹ ಬಸ್ ಮಾಲೀಕರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸಾರಿಗೆ ಆಯುಕ್ತ ವಿ.ಪಿ.ಇಕ್ಕೇರಿ ಎಚ್ಚರಿಕೆ ನೀಡಿದ್ದಾರೆ.
ಇಂದು ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ಅವರು, ಚುನಾವಣಾ ಸಂದರ್ಭದಲ್ಲಿ ಮತದಾರರನ್ನು ಖಾಸಗಿ ವಾಹನದವರು ಉಚಿತವಾಗಿ ಕರೆದೊಯ್ಯುವುದು ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆಯಾಗಿದ್ದು, ಯಾವುದೇ ಕಾರಣಕ್ಕೂ ಮತದಾರರಿಗೆ ಪ್ರಚೋದನೆ ಅಥವಾ ಆಮೀಷ ನೀಡಿದರೆ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದರು. .
ರಾಜ್ಯದಲ್ಲಿ ಸುಮಾರು ಏಳು ಸಾವಿರ ಖಾಸಗಿ ಬಸ್ಗಳಿವೆ. ಯಾವುದೇ ಬಸ್ ಮಾಲೀಕರು ನೀತಿ ಸಂಹಿತೆ ಉಲ್ಲಂಘಿಸಬಾರದು. ಒಂದು ವೇಳೆ ಉಲ್ಲಂಘಿಸಿದರೆ ಅವರ ವಿರುದ್ಧ ಕ್ರಿಮಿನಲ್ ಕೇಸು ಹಾಕುತ್ತೇವೆ ಹಾಗೂ ಭಾರೀ ದಂಡ ವಿಧಿಸುತ್ತೇವೆ ಎಂದು ಹೇಳಿದರು.