ಕೊಪ್ಪಳ.ಏ.01(AZM):ಸಿದ್ದರಾಮಯ್ಯ ಕೋಮುವಾದಿ, ಕೊಲೆಗಡುಕ, ಅವರ ತಲೆಯಲ್ಲಿ ಸಗಣಿ ತುಂಬಿಕೊಂಡಿದೆ ಎನ್ನುವ ವಿವಾದಾತ್ಮಕ ಹೇಳಿಕೆಯನ್ನು ಬಿಜೆಪಿ ಹಿರಿಯ ಮಖಂಡ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.
ಕೊಪ್ಪಳದಲ್ಲಿ ನಡೆದ ಸುದ್ಧಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸ್ವಯಂ ಘೋಷಿತ ಕುರುಬ ನಾಯಕರಾಗಿರುವ ಸಿದ್ಧರಾಮಯ್ಯ ಮಹಾನ್ ಜಾತಿವಾದಿ ಎಂದು ಹೇಳಿದ್ದಾರೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ 125 ಕೋಟಿ ರೂ. ವೆಚ್ಚದಲ್ಲಿ ಜಾತಿಗಣತಿ ಮಾಡಲಾಗಿತ್ತು. ಆ ವರದಿ ಸರಕಾರದ ಮುಂದೆ ಇದ್ದರೂ ಸಹ ಇನ್ನೂ ಏಕೆ ಬಿಡುಗಡೆ ಮಾಡುತ್ತಿಲ್ಲ. ಕುರುಬ ಸಮುದಾಯವನ್ನು ಕೇವಲ ರಾಜಕಾರಣಕ್ಕಾಗಿ ಮಾತ್ರ ಬಳಕೆ ಮಾಡುತ್ತಿರುವ ಮಹಾಪುರುಷ ಸಿದ್ದರಾಮಯ್ಯ ಎಂದು ಈಶ್ವರಪ್ಪ ಲೇವಡಿ ಮಾಡಿದರು.
ಸಿದ್ದರಾಮಯ್ಯ ಕುರುಬರಿಗಾಗಲೀ, ಅಹಿಂದ ವರ್ಗಕ್ಕಾಗಲೀ ಬಿಜೆಪಿ ನೀಡಿದ್ದಕ್ಕಿಂತ 1 ರೂ. ಕೂಡ ಹೆಚ್ಚು ನೀಡಿಲ್ಲ. ಬಿಜೆಪಿಗಿಂತ ಹೆಚ್ಚು ಅನುದಾನ ನೀಡಿದ್ದರ ಬಗ್ಗೆ ಕಾಂಗ್ರೆಸ್ ದಾಖಲೆ ನೀಡಿದರೆ ತಾವು ರಾಜಕೀಯ ಸನ್ಯಾಸತ್ವ ಸ್ವೀಕರಿಸುವುದಾಗಿ ಸವಾಲು ಹಾಕಿದರು.
ಇನ್ನು ದೇವೇಗೌಡರ ಮೇಲೆ ವಾಕ್ ಪ್ರಹಾರ ನಡೆಸಿದ ಈಶ್ವರಪ್ಪ, ಗೌಡರಿಗೆ 14 ಮಕ್ಕಳು, 14 ಸೊಸೆಯಂದಿರು ಇದ್ದಿದ್ದರೆ ರಾಜ್ಯದ 28 ಲೋಕಸಭಾ ಕ್ಷೇತ್ರಗಳಿಗೂ ದೇವೇಗೌಡರ ಕುಟುಂಬದ ಸದಸ್ಯರೇ ಅಭ್ಯರ್ಥಿಯಾಗಿರುತ್ತಿದ್ದರು ಎಂದು ಲೇವಡಿ ಮಾಡಿದರು.
ರಾಜ್ಯದಲ್ಲಿ ಬಿಜೆಪಿ ಮುಸ್ಲಿಮರಿಗೆ ಟಿಕೆಟ್ ಕೊಟ್ಟಿಲ್ಲ. ರಾಜ್ಯದ ಮುಸ್ಲಿಮರು ನಮ್ಮ ಪಕ್ಷದ ಮೇಲೆ ವಿಶ್ವಾಸ ಇಟ್ಟುಕೊಂಡಿಲ್ಲ. ಅವರು ನಮ್ಮನ್ನು ನಂಬಿ ಓಟು ಕೊಟ್ಟಾಗ ಮಾತ್ರ ಟಿಕೆಟ್ ಕೊಡಬಹುದು ಎಂದು ಇದೇ ಸಂದರ್ಭದಲ್ಲಿ ಈಶ್ವರಪ್ಪ ಹೇಳಿದ್ದಾರೆ