ನವದೆಹಲಿ, ಏಪ್ರಿಲ್ 01(AZM): ಮನಿ ಲಾಂಡ್ರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಿಯಾಂಕ ಗಾಂಧಿಯವರ ಪತಿ ರಾಬರ್ಟ್ ವಾದ್ರಾ ಸೇರಿದಂತೆ ಇಬ್ಬರು ಆರೋಪಿಗಳಿಗೆ ಸಿಬಿಐನ ವಿಶೇಷ ನ್ಯಾಯಾಲಯವು ಇಂದು ಷರತ್ತುಬದ್ಧ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.
ಪ್ರಿಯಾಂಕಾ ಗಾಂಧಿ ಅವರ ಪತಿ ರಾಬರ್ಟ್ ವದ್ರಾ ಅವರಿಗೆ ಜಾರಿ ನಿರ್ದೇಶನಾಲಯವು ಭೂ ಹಗರಣ, ಮನಿ ಲಾಂಡ್ರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊದಲಿಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿಗೊಳಿಸಿ, ನಂತರ ದೇಶದ ವಿವಿಧೆಡೆ ವಾದ್ರಾ ಅವರ ಆಪ್ತರ ಮನೆ, ಕಚೇರಿ ಮೇಲೆ ದಾಳಿ ನಡೆಸಲಾಗಿತ್ತು. ಇದಾದ ಬಳಿಕ ನಿರಂತರವಾಗಿ ಜಾರಿ ನಿರ್ದೇಶನಾಲಯ ಕಚೇರಿಗೆ ವಿಚಾರಣೆಗಾಗಿ ಹಾಜರಾಗಿದ್ದರು. ಜೊತೆಗೆ ಬಂಧನದಿಂದ ತಾತ್ಕಾಲಿಕ ರಿಲೀಫ್ ಪಡೆದಿದ್ದರು.
ತನಿಖಾಧಿಕಾರಿಗಳು ವಿಚಾರಣೆಗೆ ಕರೆದಾಗೆಲ್ಲ ಹಾಜರಾಗಬೇಕು, ಕೋರ್ಟ್ ಪೂರ್ವನುಮತಿ ಇಲ್ಲದೆ ವಿದೇಶಕ್ಕೆ ತೆರಳುವಂತಿಲ್ಲ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷಿ ನಾಶ ಮಾಡುವಂತಿಲ್ಲ ಎಂಬ ಷರತ್ತುಗಳನ್ನು ಕೋರ್ಟ್ ವಿಧಿಸಿದೆ. ರಾಬರ್ಟ್ ವಾದ್ರ ಹಾಗೂ ಮನೋಜ್ ಅರೋರಾ 5 ಲಕ್ಷ ರೂ ಮೌಲ್ಯದ ವಯಕ್ತಿಕ ಬಾಂಡ್ ಸಲ್ಲಿಸಿ ಜಾಮೀನು ಪಡೆಯಲು ಅರ್ಹರಾಗಿದ್ದಾರೆ.
ಲಂಡನ್ ಮೂಲದ ಸಂಸ್ಥೆಗೆ 17.77 ಕೋಟಿ ಅಕ್ರಮ ವರ್ಗಾವಣೆ ಮಾಡಿದ್ದಾರೆ ಎಂದು ರಾಬರ್ಟ್ ವಾದ್ರಾ ವಿರುದ್ಧ ಇಡಿ ಪ್ರಕರಣ ದಾಖಲಿಸಿದೆ. ಇದೇ ಪ್ರಕರಣದಲ್ಲಿ ವಾದ್ರಾ ಆಪ್ತ ಮನೋಜ್ ಅರೋರ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ.