ಕೋಲ್ಕತ್ತಾ, ಜೂ 22 (DaijiworldNews/MS): ಪಶ್ಚಿಮ ಬಂಗಾಳ ಮಾಜಿ ಮುಖ್ಯಮಂತ್ರಿ ಬುದ್ಧದೇವ್ ಭಟ್ಟಾಚಾರ್ಯ ಅವರ ಪುತ್ರಿ ಸುಚೇತನಾ ಭಟ್ಟಾಚಾರ್ಯ ಅವರು ಲಿಂಗ ಬದಲಾಯಿಸಲು ನಿರ್ಧರಿಸಿದ್ದು "ಟ್ರಾನ್ಸ್ಮ್ಯಾನ್" ಆಗಿ ಬದಲಾಗಿದ್ದೇನೆ ಘೋಷಿಸಿಕೊಂಡಿದ್ದಾರೆ.
ಇತ್ತೀಚೆಗೆ LGBTQ ಸಮುದಾಯದ ಜೀವನೋಪಾಯದ ಕುರಿತ ವಿಚಾರ ಸಂಕಿರಣದಲ್ಲಿ ಭಾಗವಹಿಸಿದ್ದ ಅವರು, ನಾನು ಪುರುಷ ಎಂದು ಗುರುತಿಸಿಕೊಂಡಿದ್ದೇನೆ, ದೈಹಿಕವಾಗಿಯೂ ಪುರುಷನಾಗಲು ಇಚ್ಛಿಸುತ್ತೇನೆ ಎಂದು ತಿಳಿಸಿದ್ದಾರೆ. ಅಲ್ಲದೆ ಶೀಘ್ರದಲ್ಲೇ ಲಿಂಗ ಬದಲಾವಣೆ ಶಸ್ತ್ರಚಿಕಿತ್ಸೆಗೆ (ಎಸ್ಆರ್ಎಸ್) ಒಳಗಾಗುವುದಾಗಿ ಹೇಳಿದ್ದಾರೆ.
"ನಾನು ಈಗ ವಯಸ್ಕಳಿದ್ದೇನೆ. ನನಗೆ ಈಗ 41 ವರ್ಷ. ಇದರಿಂದಾಗಿ ನನ್ನ ಜೀವನಕ್ಕೆ ಸಂಬಂಧಿಸಿದ ಎಲ್ಲಾ ನಿರ್ಧಾರಗಳನ್ನು ನಾನೇ ತೆಗೆದುಕೊಳ್ಳಬಹುದು. ಹಾಗೆಯೇ ಲಿಂಗ ಪರಿವರ್ತನೆಯ ನಿರ್ಧಾರ ತೆಗೆದುಕೊಳ್ಳುತ್ತಿದ್ದೇನೆ. ದಯವಿಟ್ಟು ಈ ವಿಷಯದಲ್ಲಿ ನನ್ನ ಪೋಷಕರನ್ನು ಎಳೆದು ತರಬೇಡಿ. ಪುರುಷನಾದ ನಂತರ ಸುಚೇತನಾ ಭಟ್ಟಾಚಾರ್ಯ ಎಂಬ ಹೆಸರನ್ನು ಸುಚೇತನ್ ಎಂದು ಬದಲಾಯಿಸಿಕೊಳ್ಳುತ್ತೇನೆ.ಈ ಎಲ್ಲಾ ವಿಚಾರವಾಗಿ ಸೂಕ್ತ ಕಾನೂನು ಮತ್ತು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಲಾಗುತ್ತಿದೆ "ಎಂದು ತಿಳಿಸಿದ್ದಾರೆ