ಬೆಂಗಳೂರು,ಏ01(AZM): ಪ್ರಧಾನಮಂತ್ರಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ನಂತರ ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ನಾಶವಾಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಇಂದು ಬೆಂಗಳೂರಿನಲ್ಲಿ ನಡೆದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ಬಿಜೆಪಿ ನಾಯಕರಿಗೆ ಹಾಗೂ ಅಧಿಕಾರದಲ್ಲಿದ್ದವರಿಗೆ ಸಂವಿಧಾನದ ಬಗ್ಗೆ ಗೌರವವಿರಲಿಲ್ಲ. ಬಿಜೆಪಿಯನ್ನು ಪ್ರೋತ್ಸಾಹಿಸುವ ಆರೆಸ್ಸೆಸ್ ನಾಯಕರು ಬಹಿರಂಗವಾಗಿ ಸಂವಿಧಾನ ವಿರುದ್ಧವಾಗಿ ಮಾತನಾಡಿದ್ದಾರೆ. ಆರೆಸ್ಸೆಸ್ ಸರಸಂಚಾಲಕ ಹಿಂದೂ ಆಚಾರ-ವಿಚಾರಗಳಿಗೆ ಸಂವಿಧಾನದಲ್ಲಿ ಬೆಲೆಯಿಲ್ಲ, ಅದನ್ನು ಬದಲಿಸಬೇಕು ಎಂದಿದ್ದರು. ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಸಂವಿಧಾನ ಬದಲಿಸಲಿಕ್ಕಾಗಿ ಅಧಿಕಾರಕ್ಕೆ ಬಂದಿರುವುದು ಎಂಬ ಹೇಳಿಕೆ ನೀಡಿದ್ದರು ಎಂದು ಅವರು ಹೇಳಿದರು.
ಸಂವಿಧಾನದ ಅಡಿಯಲ್ಲಿ ಆಯ್ಕೆಯಾದ ಸರಕಾರ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ನಾಶ ಮಾಡಲು ಮುಂದಾಗಿದ್ದರು. ಅಲ್ಲದೆ, ಸಾಂವಿಧಾನಿಕ ಸಂಸ್ಥೆಗಳಾದ ಆರ್ಬಿಐ, ಸಿಬಿಐ, ಸಿವಿಸಿ ಸೇರಿದಂತೆ ಮತ್ತಿತರೆ ಸಂಸ್ಥೆಗಳನ್ನು ದುರ್ಬಲಗೊಳಿಸಿದರು. ನ್ಯಾಯಾಂಗ ವ್ಯವಸ್ಥೆಯನ್ನೇ ಬುಡಮೇಲು ಮಾಡಿ, ನ್ಯಾಯಾಧೀಶರು ಬೀದಿಗೆ ಬರುವಂತೆ ಮಾಡಿದರು. ಹೀಗಾಗಿ, ನಮ್ಮ ದೇಶದ ಜನರು ಬುದ್ಧಿವಂತರಿದ್ದು, ಪ್ರಜಾಪ್ರಭುತ್ವ ಅಪಾಯದಲ್ಲಿದ್ದಾಗ, ಸಂವಿಧಾನಕ್ಕೆ ಧಕ್ಕೆ ಬಂದಾಗ ಸಿಡಿದೆದ್ದ ಇತಿಹಾಸವಿದೆ. ಈಗಲೂ ಜನರು ಬಿಜೆಪಿ ವಿರುದ್ಧ ಸಿಡಿದೇಳಲಿದ್ದಾರೆ ಎಂದು ಭವಿಷ್ಯ ನುಡಿದರು.