ಶಿವಮೊಗ್ಗ,ಜೂ 21 (DaijiworldNews/MS): ತೀರ್ಥಹಳ್ಳಿಯ ಪ್ರತಿಷ್ಠಿತ ಕಾಲೇಜು ವಿದ್ಯಾರ್ಥಿನಿಯರ ನಗ್ನ ವಿಡಿಯೋ ಚಿತ್ರೀಕರಣ ಪ್ರಕರಣ ಸಂಬಂಧ ಮಾಜಿ ಸಚಿವ ಕಿಮ್ಮನೆ ರತ್ನಾಕರ್ , ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ವಿರುದ್ಧ ಕಿಡಿಕಾರಿದ್ದಾರೆ.
ಮಾಧ್ಯಮದೊಂದಿಗೆ ಮಾತನಾಡಿದ ಅವರು 'ನನಗೆ ಬಂದ ಮಾಹಿತಿಯಂತೆ ಬಂಧಿತ ABVP ಮುಖಂಡ 30-40 ಹೆಣ್ಣು ಮಕ್ಕಳ ಅಶ್ಲೀಲ ವಿಡಿಯೋ ಚಿತ್ರೀಕರಿಸಿದ್ದಾನೆ. ಈತ ಮಾಡಿರುವ ಕೆಲಸಕ್ಕೆ ಮಾಜಿ ಸಚಿವ ಆರಗ ಜ್ಞಾನೇಂದ್ರ ದೊಡ್ಡ ಪ್ರತಿಭಟನೆ ಮಾಡಬೇಕಿತ್ತು. ಒಂದು ವೇಳೆ ಮುಸ್ಲಿಮರು ಇದನ್ನು ಮಾಡಿದ್ದರೆ, ಅವರು ಇಡೀ ಶಿವಮೊಗ್ಗ ಜಿಲ್ಲೆ ಬಂದ್ಗೆ ಕರೆ ನೀಡುತ್ತಿದ್ದರು. ಅದರೆ ಆರಗ ಈ ಆರೋಪಿ ಜತೆ ಕೇಸರಿ ಶಾಲು ಹಾಕಿ ಕಾಲೇಜುಗಳಿಗೆ ಹೋಗಿ ಮತ ಕೇಳಿರುವುದರ ವಿಡಿಯೋ ನನ್ನ ಬಳಿಯಿದೆ' ಎಂದಿದ್ದಾರೆ.
ಕಾಲೇಜು ವಿದ್ಯಾರ್ಥಿನಿಯರ ಅಶ್ಲೀಲ ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ಆರೋಪದ ಮೇಲೆ ಶಿವಮೊಗ್ಗ ಜಿಲ್ಲೆಯ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ABVP) ಪದಾಧಿಕಾರಿ ಪ್ರತೀಕ್ ಗೌಡ ಎಂಬಾತನನ್ನು ಪೊಲೀಸರು ಬಂಧಿಸಿದ್ದರು.
ಆದರೆ, ಬಿಜೆಪಿ ಆರೋಪಿಯು ಎಬಿವಿಪಿಯ ಅಧ್ಯಕ್ಷ ಅಥವಾ ಪದಾಧಿಕಾರಿ ಅಲ್ಲ ಎಂದು ಸಮರ್ಥಿಸಿಕೊಂಡಿದೆ.