ಮುಂಬೈ,ಏ01(AZM):ಪಿಎನ್ಬಿ ಹಗರಣ ಮುಖ್ಯ ಆರೋಪಿ ನೀರವ್ ಮೋದಿಗೆ ಸೇರಿದ ಐಶಾರಾಮಿ ಕಾರುಗಳನ್ನು ಹರಾಜು ಹಾಕಲು ಇಡಿ ಮುಂದಾಗಿದೆ.
ನೀರವ್ ಮೋದಿಗೆ ಸೇರಿದ 13 ಕಾರುಗಳನ್ನು ಹರಾಜು ಮಾಡಲಾಗುತ್ತಿದ್ದು, ಹರಾಜಿಗೆ ಒಂದು ವಾರ ಮುಂಚೆ ಹರಾಜಿನಲ್ಲಿ ಭಾಗವಹಿಸುವವರು ಕಾರುಗಳನ್ನು ಪರಿಶೀಲನೆ ಮಾಡಬಹುದಾಗಿದೆ, ಆದರೆ ಅದನ್ನು ಟೆಸ್ಟ್ ಡ್ರೈವ್ ಮಾಡಲು ಅವಕಾಶ ನೀಡಿಲ್ಲ.
ನೀರವ್ ಮೋದಿ ಸಂಗ್ರಹದಲ್ಲಿ ಐಶಾರಾಮಿ ಕಾರುಗಳು ಹಲವಿವೆ. ಒಂದು ರೋಲ್ಸ್ ರಾಯ್ಸ್, ಎರಡು ಬೆಂಜ್ ಕಾರ್, ಫೋರ್ಸ್ ಪನಾಮೆರಾ ಎಂಬ ದುಬಾರಿ ಕಾರು, ಮೂರು ಹೊಂಡಾ ಕಂಪೆನಿಯ ಕಾರುಗಳು, ಒಂದು ಟೊಯೋಟಾ ಫಾರ್ಚುನರ್ ಕಾರು, ಟೊಯೊಟಾ ಇನ್ನೋವಾ ಕಾರುಗಳನ್ನು ಹರಾಜಿಗೆ ಇಡಲಾಗುತ್ತಿದೆ.
ಮಹಾರಾಷ್ಟ್ರ ರಾಜ್ಯ ಸರ್ಕಾರದ ಅಧೀನ ಸಂಸ್ಥೆಯೊಂದಕ್ಕೆ ಹರಾಜಿನ ಜವಾಬ್ದಾರಿ ವಹಿಸಲಾಗಿದ್ದು, ಏಪ್ರಿಲ್ 18 ರಂದು ಹರಾಜು ನಡೆಯಲಿದೆ.
ಲಂಡನ್ನಲ್ಲಿ ನೀರವ್ ಮೋದಿಯನ್ನು ಬಂಧಿಸಲಾಗಿದ್ದು, ಆತನನ್ನು ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ. ನೀರವ್ ಮೋದಿಯು ಇತ್ತೀಚೆಗಷ್ಟೆ ಎರಡನೇ ಬಾರಿ ಜಾಮೀನಿಗಾಗಿ ಮನವಿ ಸಲ್ಲಿಸಿದ್ದರು, ಆದರೆ ಅದನ್ನು ನಿರಾಕರಿಸಲಾಗಿದ್ದು, ಮುಂದಿನ ವಿಚಾರಣೆಯನ್ನು ಏಪ್ರಿಲ್ 26ಕ್ಕೆ ಮುಂದೂಡಲಾಗಿದೆ.