ನವದೆಹಲಿ, ಏ 1 (MSP): ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಗೆ ಸಾಮಾಜಿಕ ಜಾಲತಾಣ ದೈತ್ಯ ಫೇಸ್ ಬುಕ್ ಶಾಕ್ ನೀಡಿದೆ. ಕಾಂಗ್ರೆಸ್ನ ಐಟಿ ಸೆಲ್ಗೆ ಸಂಬಂಧಿಸಿದ ವ್ಯಕ್ತಿಗಳ 687 ಖಾತೆಗಳು ಮತ್ತು ಫೇಸ್ಬುಕ್ ಪುಟಗಳನ್ನು ಸಂಸ್ಥೆ ಡಿಲೀಟ್ ಮಾಡಿದೆ. ಫೇಸ್ಬುಕ್ ನಕಲಿ ಅಕೌಂಟ್ಗಳು ಮತ್ತು ಸ್ಪ್ಯಾಮ್ ಸಂದೇಶಗಳನ್ನು ಹರಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳುತ್ತಿರುವುದಾಗಿ ಫೇಸ್ಬುಕ್ ಪ್ರಕಟಣೆ ತಿಳಿಸಿದೆ.
'ಅನಧಿಕೃತ ಹಾಗೂ ಸಂಶಯಾಸ್ಪದ ನಡವಳಿಕೆ' ಹಾಗೂ ಸ್ಪಾಮ್ಗಳನ್ನು ಹರಡುತ್ತಿರುವ ಹಿನ್ನೆಲೆಯಲ್ಲಿ ತೆಗೆದುಹಾಕಲಾಗಿದೆ ಎಂದು ಏ.1 ರಂದು ಸಂಸ್ಥೆ ದೃಢಪಡಿಸಿದ್ದು, 687 ಖಾತೆಗಳು ಸಂಘಟಿತ ಜಾಲದ ಭಾಗವಾಗಿತ್ತು ಎಂದು ತಿಳಿಸಿದೆ.
ಇದಷ್ಟೇ ಅಲ್ಲದೇ, ಪಾಕಿಸ್ತಾನದಿಂದ ಕಾರ್ಯನಿರ್ವಹಿಸುವ ಇಂತಹದೇ 103 ಪುಟಗಳು, ಗ್ರೂಪ್ ಮತ್ತು ಖಾತೆಗಳನ್ನು ಫೇಸ್ಬುಕ್ ಕಿತ್ತುಹಾಕಿದೆ.