ಬೆಂಗಳೂರು, ಜೂ 17 (DaijiworldNews/HR): ನಾವು ಬಿಜೆಪಿಯವರನ್ನು ಕೇಳಿಕೊಂಡು ಅಧಿಕಾರ ಮಾಡಲು ಆಗುವುದಿಲ್ಲ. ನಾವು ಈಗಾಗಲೇ ಪ್ರಣಾಳಿಕೆಯಲ್ಲಿ ಭರವಸೆ ನೀಡಿದ್ದೇವೆ. ಅದರಂತೆ ಗ್ಯಾರಂಟಿಗಳನ್ನು ಜಾರಿಗೊಳಿಸುತ್ತೇವೆ. ಎಷ್ಟೇ ಕಷ್ಟವಾದರೂ ಜಾರಿಗೊಳಿಸುತ್ತೇವೆ. ಜನಪರ ಆಡಳಿತ ಕೊಡುವ ವಿಚಾರವಾಗಿ ರಾಜಿ ಪ್ರಶ್ನೆಯೇ ಇಲ್ಲ ಎಂದು ಗೃಹ ಸಚಿವ ಡಾ.ಜಿ ಪರಮೇಶ್ವರ್ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಬಿಜೆಪಿಯವರು ಈಗ ಮತಾಂತರ ನಿಷೇಧ ಕಾಯ್ದೆ ಬಗ್ಗೆ ಮಾತನ್ನಾಡುತ್ತಿದ್ದಾರೆ. ದೇಶದ ಆಡಳಿತ ವ್ಯವಸ್ಥೆಯಲ್ಲಿ ಸಂವಿಧಾನವೇ ಭಗವದ್ಗೀತೆ, ಬೈಬಲ್, ಕುರಾನ್. ಸಂವಿಧಾನ ಭಾರತೀಯರಿಗೆ ಗ್ರಂಥ ಇದ್ದಂತೆ. ಕಲಂ 25ರಲ್ಲಿ ದೇಶದ ಪ್ರತಿಯೊಬ್ಬ ಪ್ರಜೆಗೂ ಧರ್ಮ ಆಯ್ಕೆಯ ಹಕ್ಕು ನೀಡಿದೆ. ಅದಕ್ಕೆ ವಿರುದ್ಧವಾಗಿ ಬಿಜೆಪಿಯವರು ಮತಾಂತರ ನಿಷೇಧ ಕಾಯ್ದೆ ಮಾಡಿದ್ದರು ಎಂದರು.
ಇನ್ನು ಬಿಜೆಪಿ ಸರ್ಕಾರ ಮಾಡಿದ ಕಾಯ್ದೆ ಸಂವಿಧಾನಕ್ಕೆ ವಿರುದ್ಧವಾಗಿದೆ ಎಂದು ಸದನದಲ್ಲಿ ಮಸೂದೆ ಮಂಡಿಸಿದ ವೇಳೆಯೇ ಹೇಳಿದ್ದೆವು. ಈಗ ರಾಜ್ಯದಲ್ಲಿ ನಮ್ಮ ಸರ್ಕಾರ ಬಂದಿದೆ. ನಮ್ಮ ಸರ್ಕಾರಕ್ಕೆ ಸಂವಿಧಾನದ ಮೇಲೆ ನಂಬಿಕೆ ಇದೆ. ಹಾಗಾಗಿ ನಾವು ಮತಾಂತರ ನಿಷೇಧ ಕಾಯ್ದೆಯನ್ನು ಹಿಂತೆಗೆದುಕೊಳ್ಳುತ್ತಿದ್ದೇವೆ ಎಂದು ಹೇಳಿದ್ದಾರೆ.