ವೇಲೂರು,ಏ 1 (MSP): ಲೋಕಸಭೆ ಚುನಾವಣೆಗೆ ಸಜ್ಜಾಗುತ್ತಿರುವ ತಮಿಳುನಾಡಿನಲ್ಲಿ ಹಣದ ಹೊಳೆಯೇ ಹರಿಸಲಾಗುತ್ತಿದೆಯಾ ಎನ್ನುವ ಅನುಮಾನ ಕಾಡಲಾರಂಭಿಸಿದೆ. ಮಾರ್ಚ್ 29ರ ರಾತ್ರಿ ದಾಖಲೆಗಳಿಲ್ಲದ ಭಾರೀ ಪ್ರಮಾಣದ ನಗದು ಹಣವನ್ನು ಐಟಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಅಂದು ನಡುರಾತ್ರಿ ಕಾಲೇಜೊಂದರಿಂದ ಹೊರಗೆ ಒಯ್ದು ಸಿಮೆಂಟ್ ಗೋದಾಮಿನಲ್ಲಿ ಹಣ ಶೇಖರಿಸುತ್ತಿದ್ದಾಗ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ ಕಂತೆ ಕಂತೆ ಹಣ ಪತ್ತೆಯಾಗಿದೆ. ಈ ಹಣವನ್ನು ವಿಭಾಗ ಮತ್ತು ವಾರ್ಡ್ವಾರುಗಳಿಗೆ ಹಂಚಲೆಂದು ದೊಡ್ಡ ಮೊತ್ತದ ನಗದನ್ನು ರಟ್ಟಿನ ಪೆಟ್ಟಿಗೆಗಳಲ್ಲಿ ಬೇರೆ ಬೇರೆಯಾಗಿ ತುಂಬಿಸಿ ಇಡಲಾಗಿತ್ತು ಎನ್ನಲಾಗಿದೆ.
ಐಟಿ ಅಧಿಕಾರಿಗಳು ಕಲೆ ಹಾಕಿದ ಮಾಹಿತಿಯಂತೆ ವೇಲೂರ್ನ ಕಾಟ್ಪಾಡಿಯಲ್ಲಿರುವ ಕಿಂಗ್ಸ್ಟನ್ ಎಂಜಿನಿಯರಿಂಗ್ ಕಾಲೇಜು ಮತ್ತು ದೊರೈ ಮುರುಗನ್ ಬಿ.ಎಡ್ ಕಾಲೇಜಿನಿಂದ ಹಣದ ಮೂಟೆಗಳನ್ನು ಸಿಮೆಂಟ್ ಗೋದಾಮಿ ಸಾಗಿಸಲಾಗಿತ್ತು ಎಂದು ತಿಳಿದುಬಂದಿದೆ. ಡಿಎಂಕೆ ಪಕ್ಷದ ಖಜಾಂಜಿ ದೊರೈ ಮುರುಗನ್ ಅವರಿಗೆ ಈ ಎರಡೂ ಕಾಲೇಜುಗಳು ಸೇರಿದ್ದು ಎಂದು ತಿಳಿದುಬಂದಿದೆ. ಈ ಹಿನ್ನಲೆಯಲ್ಲಿ ದೊರೈ ಮುರುಗನ್ ನಿವಾಸದ ಮೇಲೂ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ದೊರೈ ಮುರುಗನ್ ಪುತ್ರ ವೇಲೂರು ಲೋಕಸಭಾ ಕ್ಷೇತ್ರದಿಂದ ಡಿಎಂಕೆ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.
ಮತದಾರರನ್ನು ಓಲೈಸಲು ಹಣ ಹಂಚುವ ಕೆಟ್ಟ ಪರಂಪರೆ ತಮಿಳುನಾಡಿನಲ್ಲಿ ಹಿಂದಿನಿಂದಲೂ ಚಾಲ್ತಿಯಲ್ಲಿದೆ.