ಬೆಂಗಳೂರು, ಜೂ. 13 (DaijiworldNews/SM): ಸರಕಾರಿ ಬಸ್ ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಕಲ್ಪಿಸುವ ಶಕ್ತಿ ಯೋಜನೆಗೆ ರಾಜ್ಯದೆಲ್ಲೆಡೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಯೋಜನೆ ಆರಂಭಗೊಂಡ ಎರಡನೇ ದಿನವೇ ಭಾರೀ ಸಂಖ್ಯೆಯಲ್ಲಿ ಮಹಿಳೆಯರು ಬಸ್ ಏರಿದ್ದಾರೆ. ಸೋಮವಾರದ ಅಂಕಿಅಂಶ ಹೊರಬಿದ್ದಿದ್ದು, ಎರಡನೇ ದಿನ ಬರೋಬ್ಬರಿ 41. 34 ಲಕ್ಷ ಮಹಿಳೆಯರು ಉಚಿತವಾಗಿ ಪ್ರಯಾಣಿಸಿದ್ದಾರೆ.
ಶಕ್ತಿ ಯೋಜನೆಗೆ ಉತ್ತಮ ಬೆಂಬಲ ವ್ಯಕ್ತವಾಗುತ್ತಿದ್ದು, ಮೊದಲ ದಿನವಾದ ರವಿವಾರ ಮಧ್ಯಾಹ್ನ 1 ಗಂಟೆಯಿಂದ ರಾತ್ರಿ 12ರವರೆಗೆ ಒಟ್ಟು 5.71 ಲಕ್ಷ ಮಹಿಳೆಯರು ಪ್ರಯಾಣಿಸಿದ್ದರು. ಎರಡನೇ ದಿನವಾದ ಸೋಮವಾರ ಒಟ್ಟು 41,34,726 ಮಹಿಳೆಯರು ಉಚಿತವಾಗಿ ಪ್ರಯಾಣಿಸಿದ್ದಾರೆ ಎಂದು ಸಾರಿಗೆ ಇಲಾಖೆ ತಿಳಿಸಿದೆ. ಮಂಗಳವಾರವೂ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಸರಕಾರಿ ಬಸ್ ಅವಲಂಬಿಸಿದ್ದಾರೆ.
ಬಿಎಂಟಿಸಿ ಬಸ್ನಲ್ಲಿ ಒಟ್ಟು 17,57,887, ಕೆಎಸ್ಆರ್ ಟಿಸಿಯಲ್ಲಿ 11,40,057 ಮಹಿಳೆಯರು, ವಾಯವ್ಯ ಸಾರಿಗೆ ಬಸ್ನಲ್ಲಿ 8,31,840, ಕಲ್ಯಾಣ ಕರ್ನಾಟಕ ಸಾರಿಗೆಯಲ್ಲಿ 4,04,942 ಮಹಿಳೆಯರು ಪ್ರಯಾಣಿಸಿದ್ದು, ಇವರ ಪ್ರಯಾಣದ ಟಿಕೆಟ್ ವೆಚ್ಚ 8,83,53,434 ರೂ. ಆಗಿದೆ ಎಂದು ಸಾರಿಗೆ ಇಲಾಖೆ ತಿಳಿಸಿದೆ.
ಎರಡೇ ದಿನಗಳಲ್ಲಿ ಇಷ್ಟೊಂದು ಪ್ರಮಾಣದ ಮೊತ್ತ ಸರಕಾರ ಪಾವತಿಸಬೇಕೆಂದಾದಲ್ಲಿ ಮುಂದಿನ ದಿನಗಳನ್ನು ಸರಕಾರ ಯಾವ ರೀತಿಯಲ್ಲಿ ನಿಭಾಯಿಸಲಿದೆ ಎನ್ನುವುದೇ ಯಕ್ಷ ಪ್ರಶ್ನೆಯಾಗಿದೆ.