ಬೆಂಗಳೂರು, ಜೂ 13 (DaijiworldNews/MS): ರಾಜ್ಯದಲ್ಲಿ ವಿದ್ಯುತ್ ದರ ಏರಿಕೆ ಕ್ರಮವನ್ನು ಮರು ಪರಿಶೀಲಿಸುವಂತೆ ಕೋರಿ ಕಾಂಗ್ರೆಸ್ ಹಿರಿಯ ನಾಯಕ ತನ್ವೀರ್ ಸೇಠ್ ಅವರು ಸಿಎಂ ಸಿದ್ದರಾಮಯ್ಯನವರಿಗೆ ಪತ್ರ ಬರೆದಿದ್ದಾರೆ.
ಎರಡು ಪುಟಗಳ ಸುಧೀರ್ಘ ಪತ್ರದಲ್ಲಿ ತನ್ವೀರ್ ಸೇಠ್ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಪ್ರಚಂಡ ಜಯಗಳಿಸಿದೆ. ಸರ್ಕಾರ ರಚನೆಯಾದ ದಿನವೇ 5 ಗ್ಯಾರಂಟಿ ಘೋಷಣೆ ಮಾಡಲಾಗಿದೆ. ಗ್ಯಾರಂಟಿಗಳಲ್ಲಿ ಒಂದಾದ ಪ್ರತಿ ಮನೆಗೆ 200 ಯೂನಿಟ್ ಉಚಿತ ವಿದ್ಯುತ್ ಘೋಷಣೆಗೆ ವ್ಯತಿರಿಕ್ತವೆಂಬಂತೆ ಕರ್ನಾಟಕ ವಿದ್ಯುತ್ ನಿಯಂತ್ರಣ ಮಂಡಳಿಯಿಂದ ರಾಜ್ಯದ ಎಲ್ಲಾ ನಿಗಮಗಳಲ್ಲಿ ವಿದ್ಯುತ್ ದರ ಹೆಚ್ಚಿಸಲಾಗಿದೆ. ಈಗ ಈ ದರ ಏರಿಕೆಯಿಂದ ಸರ್ಕಾರ ಘೋಷಿಸಿರುವ 200 ಯೂನಿಟ್ ಉಚಿತ ಸೌಲಭ್ಯವನ್ನು ಜನ ಸಾಮಾನ್ಯರಿಗೆ ನೀಡಿ ಕಿತ್ತುಕೊಂಡಂತಾಗಿದೆ ಎಂದು ಹೇಳಿದ್ದಾರೆ.
ಹೀಗಾಗಿ ಸಾರ್ವಜನಿಕ ಹಿತದೃಷ್ಟಿಯಿಂದ ವಿದ್ಯುತ್ ದರ ಏರಿಕೆ ಆದೇಶವನ್ನ ಮರುಪರಿಶೀಲಿಸಬೇಕು, ಜನಸಾಮಾನ್ಯರಿಗೆ ಹೊರೆಯಾಗದಂತೆ ನೋಡಿಕೊಳ್ಳಬೇಕು ಎಂದು ಕೋರಿದ್ದಾರೆ.