ಹುಬ್ಬಳ್ಳಿ, ಜೂ13 (DaijiworldNews/HR): ವಿದ್ಯುತ್ ದರ ಏರಿಕೆ ಪ್ರಸ್ತಾವನೆಯನ್ನು ನಮ್ಮ ಬಿಜೆಪಿ ಸರಕಾರ ಒಪ್ಪಿರಲಿಲ್ಲ. ಈಗ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಏರಿಕೆ ಮಾಡಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟನೆ ನೀಡಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಸರಕಾರದ ಅವಧಿಯಲ್ಲಿ ದರ ಏರಿಕೆ ಪ್ರಸ್ತಾವನೆ ಸಲ್ಲಿಸಿದ್ದರು. ಆದರೆ ನಾವು ಇದನ್ನು ಒಪ್ಪಿರಲಿಲ್ಲ. ಆದರೆ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ವಿದ್ಯುತ್ ದರ ಏರಿಕೆಗೆ ಒಪ್ಪಿಗೆ ನೀಡಿದೆ ಎಂದರು.
ಇನ್ನು ಸರಕಾರದ ಗ್ಯಾರಂಟಿಗಳ ಬಗ್ಗೆ ಕಾದು ನೋಡುತ್ತಿದ್ದೇವೆ. ಉಚಿತ ಪ್ರಯಾಣ ಆರಂಭದ ಶೂರತ್ವ ಆಗಿದೆ. ಮಹಿಳೆಯರು ಓಡಾಡಲು ಬಸ್ಸುಗಳೇ ಇಲ್ಲ. ಸಾರಿಗೆ ಸಂಸ್ಥೆಗಳು ಹೆಚ್ಚಿನ ಪ್ರಮಾಣದಲ್ಲಿ ಡಿಸೇಲ್ ಬಳಕೆ ಮಾಡುತ್ತಿವೆ. ಡಿಸೇಲ್ ದರ ಏರಿಕೆಯಿಂದ ಸಾಕಷ್ಟು ಸಂಕಷ್ಟ ಅನುಭವಿಸುವಂತೆ ಆಗಿತ್ತು. ಇವುಗಳ ನೆರವಿಗೆ ನಮ್ಮ ಸರಕಾರ ಸಾಕಷ್ಟು ಅನುದಾನ ಬಿಡುಗಡೆ ಮಾಡಿದೆ. ಇದನ್ನು ಈ ಸರಕಾರ ಮುಂದುವರಿಸಿಕೊಂಡು ಹೋಗಬೇಕು ಎಂದು ಹೇಳಿದ್ದಾರೆ.