ಬೆಂಗಳೂರು, ಜೂ 12 (DaijiworldNews/HR): ಕಲುಷಿತ ನೀರಿನ ಅನಾಹುತ ಕೊಪ್ಪಳ ಜಿಲ್ಲೆಯಲ್ಲಿ ಮರು ಕಳಿಸಿದರೆ ನೇರವಾಗಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳನ್ನು ಹೊಣೆ ಮಾಡಿ ಅಮಾನತುಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ.
ಕುಡಿಯುವ ನೀರಿನ ಸಮಸ್ಯೆ ಹಿನ್ನೆಲೆ ಅಧಿಕಾರಿಗಳೊಂದಿಗೆ ವೀಡಿಯೊ ಕಾನ್ಫರೆನ್ಸ್ ನಡೆಸಿ ಮಾತನಾಡಿದ ಸಿಎಂ, ಮೊದಲ ಅನಾಹುತ ಸಂಭವಿಸಿದಾಗಲೇ ಏಕೆ ಎಚ್ಚೆತ್ತುಕೊಳ್ಳಲಿಲ್ಲ? ಮತ್ತೆ ಘಟನೆ ಮರುಕಳಿಸಿದೆ. ನೀವು ಏನ್ ಮಾಡ್ತಾ ಇದೀರಿ? ಕಚೇರಿಯಲ್ಲಿ ಕುಳಿತು ಕೆಲಸ ಮಾಡಬಾರದು. ಸ್ಥಳಕ್ಕೆ ಭೇಟಿ ನೀಡಿ ಸಮಗ್ರವಾಗಿ ಅಧ್ಯಯನ ನಡೆಸಬೇಕು ಎಂದಿದ್ದಾರೆ.
ಇನ್ನು ಮತ್ತೆ ಕಲುಷಿತ ನೀರಿನ ಅನಾಹುತ ಆಗಬಾರದು. ಮತ್ತೆ ಮರುಕಳಿಸಿದರೆ ನೀವೇ ಹೊಣೆ ಆಗುತ್ತೀರಿ. ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಕೊಪ್ಪಳ ಜಿಲ್ಲೆ ಸೇರಿ ಎಲ್ಲೆಲ್ಲಿ ಕಲುಷಿತ ನೀರು ಕುಡಿದು ಜನರ ಆರೋಗ್ಯ ಮತ್ತು ಜೀವಕ್ಕೆ ಸಮಸ್ಯೆ ಆಗಿದೆಯೋ ಆ ಬಗ್ಗೆ ತನಿಖೆ ನಡೆಸುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಸೂಚಿಸಿದ್ದಾರೆ.