ಬೆಂಗಳೂರು, ಏ01(SS): ಈ ದೇಶಕ್ಕೆ ಏನೂ ಮಾಡದ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಪಕ್ಷವನ್ನು ಸೋಲಿಸುವುದೇ ನಮ್ಮ ಮುಖ್ಯ ಗುರಿಯಾಗಬೇಕು ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.
ಜೆಡಿಎಸ್ - ಕಾಂಗ್ರೆಸ್ ಮೈತ್ರಿ ಪಕ್ಷಗಳ ಬೃಹತ್ ಪರಿವರ್ತನಾ ಸಮಾವೇಶದಲ್ಲಿ ಮತನಾಡಿದ ರಾಹುಲ್ ಗಾಂಧಿ, ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರು ಈಗ ಒಟ್ಟಾಗಿ ಕೆಲಸ ಮಾಡಬೇಕು. ದೇಶಕ್ಕೆ ಏನೂ ಮಾಡದ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಪಕ್ಷವನ್ನು ಸೋಲಿಸುವುದೇ ನಮ್ಮ ಮುಖ್ಯ ಗುರಿಯಾಗಬೇಕು. ಅದಕ್ಕಾಗಿ ಜೆಡಿಎಸ್ ಅಭ್ಯರ್ಥಿ ಇದ್ದ ಕಡೆ ಕಾಂಗ್ರೆಸ್ ಕಾರ್ಯಕರ್ತರು, ಅದೇ ರೀತಿ ಕಾಂಗ್ರೆಸ್ ಅಭ್ಯರ್ಥಿ ಇದ್ದ ಕಡೆ ಜೆಡಿಎಸ್ ಕಾರ್ಯಕರ್ತರು ಪ್ರಚಾರ ಮಾಡಿ ಗೆಲ್ಲಿಸಬೇಕು ಎಂದು ತಿಳಿಸಿದ್ದಾರೆ.
ಕಾಂಗ್ರೆಸ್ ಮತ್ತು ಜೆಡಿಎಸ್ ಮಾತ್ರ ಬಡವರು, ರೈತರ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಆದರೆ ಮೋದಿ ಕೇವಲ ದುಡ್ಡಿದವರು ಹಾಗೂ ಉದ್ಯಮಿಗಳ ಪರವಾಗಿದ್ದಾರೆ ಎಂದು ರಾಹುಲ್ ವ್ಯಂಗ್ಯವಾಡಿದರು.
ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮಾತನಾಡಿ, ದೇಶದ ರಾಜಕಾರಣದಲ್ಲಿ ಬದಲಾವಣೆ ಅನಿವಾರ್ಯವಾಗಿದೆ. ರಾಜ್ಯದ 28 ಕ್ಷೇತ್ರಗಳ ಪೈಕಿ ಕಾಂಗ್ರೆಸ್-ಜೆಡಿಎಸ್ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಮೂಲಕ ದೇಶದ ರಾಜಕಾರಣದ ಬದಲಾವಣೆಗೆ ಸಾಕ್ಷಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭ ಮಾತನಾಡಿದ ಸಿದ್ದರಾಮಯ್ಯ, ರಾಹುಲ್ ಗಾಂಧಿ ಸೂಚನೆ ಮೇರೆಗೆ 2 ಪಕ್ಷಗಳ ಜಂಟಿ ಸಮಾವೇಶ ಆಯೋಜಿಸಿದ್ದು, ದೇಶಕ್ಕೆ ಬದಲಾವಣೆಯ ಸಂದೇಶ ನೀಡುವುದು ಇದರ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು.
ಇದೇ ವೇಳೆ ಮಾತನಾಡಿದ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ, ಈ ಸಮಾವೇಶದ ಮೂಲಕ ದೇಶಕ್ಕೆ ಮೈತ್ರಿ ಕೂಟದ ಬಗ್ಗೆ ಸ್ಪಷ್ಟ ಸಂದೇಶ ರವಾನೆಯಾಗಬೇಕು ಎಂದು ತಿಳಿಸಿದರು.